ಬದಿಯಡ್ಕ : ಸ್ಥಳೀಯ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಊರ ಭಕ್ತ ಬಾಂಧವರ ಪೂರ್ಣ ಸಹಯೋಗದೊಂದಿಗೆ ಓಣಂ ಹಬ್ಬ ಆಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಸೌಹಾರ್ದಯುತ ವಾತಾವರಣದಲ್ಲಿ ಆಯೋಜಿಸಲಾಗಿದ್ದು, ಕಾರ್ಯಕ್ರಮವು ಅಭೂತಪೂರ್ವ ಯಶಸ್ಸನ್ನು ಕಂಡಿತು.
ದಿನವಿಡೀ ನಡೆದ ಆಚರಣೆಯ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಮಹನೀಯರಿಗೆ ವಿವಿಧ ಕ್ರೀಡೆ ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಊರಿನ ಸಮಸ್ತ ಭಕ್ತಾದಿಗಳು ಅತ್ಯಂತ ಉತ್ಸಾಹದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಂಡರು. ತದನಂತರ ಮಹಿಳೆಯರಿಂದ ಕೇರಳದ ಸಾಂಪ್ರದಾಯಿಕ 'ತಿರುವಾದಿರ' ನೃತ್ಯ, 'ಓಣಂ ಪಾಟ್' (ಓಣಂ ಹಾಡುಗಳು) ಹಾಗೂ ಜ್ಞಾನವರ್ಧಕ ರಸಪ್ರಶ್ನೆ ಸ್ಪರ್ಧೆಯಂತಹ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡವು. ಮಧ್ಯಾಹ್ನ ಬಂದಂತಹ ಎಲ್ಲಾ ಭಕ್ತಾದಿಗಳಿಗೆ ಕಣ್ಣು-ಮನ ತುಂಬುವಂತಹ ಸುಕೃತಿಯ ಓಣಂ ಸದ್ಯ (ಸಂಪ್ರದಾಯಿಕ ಓಣಂ ಔತಣ) ಉಣಬಡಿಸಲಾಯಿತು.
ಮಧ್ಯಾಹ್ನದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರದ ತಂತ್ರಿವರ್ಯರು ಹಾಗೂ ಆಡಳಿತ ಮೊಕ್ತೇಸರರಾದ ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಉಳಿಯತ್ತಾಯ ವಿಷ್ಣು ಅಸ್ರರು ವಹಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉದ್ಯಮಿ ವಸಂತ ಪೈ ಬದಿಯಡ್ಕ ಅವರು ಶುಭ ಹಾರೈಸಿದರು.
ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀಧರ ಪ್ರಸಾದ್, ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಬ್ಬಾರ್ ಹಾಗೂ ಮಾತೃ ಸಮಿತಿಯ ಅಧ್ಯಕ್ಷರಾದ ಡಾ. ಮಾಲತಿ ಪ್ರಕಾಶ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕೋಶಾಧಿಕಾರಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಎಲ್ಲರನ್ನೂ ಆದರದಿಂದ ಸ್ವಾಗತಿಸಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಅಪ್ಪಣ್ಣ ಸೀತಾಂಗೋಳಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಕೊನೆಯಲ್ಲಿ ಮಾತೃ ಸಮಿತಿಯ ಉಪಾಧ್ಯಕ್ಷೆ ವಾಣಿ ಪಿ. ಎಸ್. ಧನ್ಯವಾದ ಸಮರ್ಪಿಸಿದರು. ಊರಿನ ಭಕ್ತಾದಿಗಳ ಭಾಗವಹಿಸುವಿಕೆಯೊಂದಿಗೆ ಓಣಂ ಆಚರಣೆಯು ಸಂಭ್ರಮದಿಂದ ಮುಕ್ತಾಯಗೊಂಡಿತು.

.jpeg)
0 Comments