ಡೆಹ್ರಾಡೂನ್ : ಉತ್ತರಾಖಂಡದಲ್ಲಿ ಮುಂಗಾರು ಮಳೆ ಅಬ್ಬರ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ. ಭೂಕುಸಿತ, ಮನೆ ಕುಸಿತ ಹಾಗೂ ಹಠಾತ್ ಪ್ರವಾಹದಿಂದ ರುದ್ರಪ್ರಯಾಗ, ಅಲ್ಮೋರಾ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ರುದ್ರಪ್ರಯಾಗದ ಧಾರ್ ಕಿ ಟುನಿ ಪ್ರದೇಶದಲ್ಲಿ ಗುಡ್ಡ ಕುಸಿದು ಟಿನ್ ಶೆಡ್ ಮೇಲೆ ಮಣ್ಣು ಮತ್ತು ಅವಶೇಷಗಳು ಬಿದ್ದ ಪರಿಣಾಮ ಇಬ್ಬರು ನೇಪಾಳಿ ಕಾರ್ಮಿಕರು ಮೃತಪಟ್ಟಿದ್ದಾರೆ. ವದ್ಯೂರಾ ಗ್ರಾಮದಲ್ಲಿ ಮನೆಯ ಮೇಲೆ ಅವಶೇಷಗಳು ಕುಸಿದು ಮೂವರು ಮೃತಪಟ್ಟಿದ್ದಾರೆ.
ಭಾರಿ ಮಳೆಯಿಂದ ಅಲ್ಮೋರಾದಲ್ಲಿ ಹಲವು ಮನೆಗಳಿಗೆ ನೀರು ಹಾಗೂ ಮಣ್ಣು ನುಗ್ಗಿದ್ದು, ರಸ್ತೆಗಳು ಬಂದ್ ಆಗಿವೆ. ಡೆಹ್ರಾಡೂನ್‌ನ ಹರ್ಬರ್ಟ್ಪುರ್, ವಿಕಾಸನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದ್ದು, ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಪ್ರೇಮನಗರದಲ್ಲಿ ಪ್ರವಾಹದ ನೀರಿನಲ್ಲಿ ಕಾರೊಂದು ಕೊಚ್ಚಿಹೋಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ರುದ್ರಪ್ರಯಾಗದ ಕಿಮಾನಾ–ಡಾಂಕೋಟ್ ಪ್ರದೇಶದಲ್ಲಿ ನಿರಂತರ ಭೂಕುಸಿತದಿಂದ ಮನೆಗಳಲ್ಲಿ ಬಿರುಕು, ರಸ್ತೆ, ಕೃಷಿ ಜಮೀನು ಹಾಗೂ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಹಾನಿಯಾಗಿದೆ. ರಸ್ತೆ ಸಂಚಾರ ಹಾಗೂ ನೀರು ಪೂರೈಕೆ ವ್ಯತ್ಯಯಗೊಂಡಿದೆ.
ಪರಿಸ್ಥಿತಿ ಎದುರಿಸಲು ಎಸ್‌ಡಿಆರ್‌ಎಫ್ ಹಾಗೂ ವಿಪತ್ತು ನಿರ್ವಹಣಾ ತಂಡಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಭೂಕುಸಿತ ಸಾಧ್ಯತೆ ಇರುವ ಪ್ರದೇಶಗಳಿಗೆ ತೆರಳದಂತೆ ಹಾಗೂ ಅನಗತ್ಯ ಪ್ರಯಾಣ ತಪ್ಪಿಸುವಂತೆ ಜಿಲ್ಲಾಡಳಿತ ಯಾತ್ರಿಕರು ಮತ್ತು ಪ್ರವಾಸಿಗರಿಗೆ ಎಚ್ಚರಿಕೆ ನೀಡಿದೆ.

0 Comments