ನವದೆಹಲಿ : ನೈಜ ವ್ಯಕ್ತಿಗಳೆಂದು ಬಳಕೆದಾರರನ್ನು ತಪ್ಪುದಾರಿಗೆಳೆಯುವ ರೀತಿಯಲ್ಲಿ ಕಾರ್ಯನಿರ್ವಹಿಸುವ AI ಆಧಾರಿತ ಪ್ರೊಫೈಲ್‌ಗಳ ವಿರುದ್ಧ ಇನ್‌ಸ್ಟಾಗ್ರಾಂ ಹೊಸ ಕ್ರಮಕ್ಕೆ ಮುಂದಾಗಿದೆ. AI ಮೂಲಕ ಸೃಷ್ಟಿಸಲಾದ ವಿಷಯಗಳನ್ನು ಸರಿಯಾಗಿ ಗುರುತಿಸದ ಖಾತೆಗಳ ರೀಚ್ ಅನ್ನು ಕಡಿತಗೊಳಿಸುವ ನಿಯಮ ಜಾರಿಗೆ ತರಲಾಗುತ್ತಿದೆ.
AI ಬಳಸಿ ರಚಿಸಲಾದ ಪ್ರೊಫೈಲ್‌ಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ ‘ಎಐ ಕ್ರಿಯೇಟರ್’ಲೇಬಲ್ ಬದಲಿಗೆ ಇದೀಗ ‘ಎಐ - ಜನೆರೇಟೆಡ್ ಪ್ರೊಫೈಲ್ ’ ಎಂಬ ಹೊಸ ಲೇಬಲ್ ಬಳಸಲಾಗುತ್ತದೆ. ಪ್ರೊಫೈಲ್‌ನ ಹೆಸರಿನ ಕೆಳಭಾಗದಲ್ಲೇ ಈ ಲೇಬಲ್ ಸ್ಪಷ್ಟವಾಗಿ ಕಾಣುವಂತೆ ಮಾಡಲಾಗುತ್ತದೆ.
ಇಂತಹ ಖಾತೆಗಳಿಂದ ಪ್ರಕಟವಾಗುವ ಪೋಸ್ಟ್, ರೀಲ್ಸ್ ಮತ್ತು ಸ್ಟೋರಿಗಳಲ್ಲಿಯೂ AI ಮೂಲಕ ರಚಿಸಲಾಗಿದೆ ಎಂಬ ಮಾಹಿತಿ ನೀಡಲಾಗುತ್ತದೆ. ಲೇಬಲ್ ಹಾಕದೆ AI ವಿಷಯಗಳನ್ನು ಪ್ರಕಟಿಸುವ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಇನ್‌ಸ್ಟಾಗ್ರಾಂ ತಿಳಿಸಿದೆ.
ಅಂತಹ ಖಾತೆಗಳ ವಿಷಯಗಳು ಫಾಲೋ ಮಾಡದ ಬಳಕೆದಾರರಿಗೆ ಎಕ್ಸ್‌ಪ್ಲೋರ್, ರೀಲ್ಸ್ ಹಾಗೂ ಫೀಡ್ ಶಿಫಾರಸುಗಳ ಮೂಲಕ ತಲುಪುವುದನ್ನು ನಿರ್ಬಂಧಿಸುವ ಸಾಧ್ಯತೆಯಿದೆ. ಬಳಕೆದಾರರು ನೈಜ ವ್ಯಕ್ತಿಯೊಂದಿಗೆ ಸಂವಹನ ನಡೆಸುತ್ತಿದ್ದಾರೆಯೇ ಅಥವಾ AI ಸೃಷ್ಟಿಸಿದ ಪಾತ್ರದೊಂದಿಗೆ ಸಂಪರ್ಕದಲ್ಲಿದ್ದಾರೆಯೇ ಎಂಬುದು ಸ್ಪಷ್ಟವಾಗಿಸುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ.
ಅನುಮತಿಯಿಲ್ಲದೆ ಇತರರ ರೂಪವನ್ನು ಬಳಸಿಕೊಂಡು AI ಚಿತ್ರಗಳು ಮತ್ತು ಪಾತ್ರಗಳನ್ನು ಸೃಷ್ಟಿಸುವ ಸಾಧನಗಳ ವಿರುದ್ಧ ಆಕ್ಷೇಪಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮೆಟಾ ಈ ಹೊಸ ಸುರಕ್ಷತಾ ಕ್ರಮಕ್ಕೆ ಮುಂದಾಗಿದೆ.
ಇದರ ಜೊತೆಗೆ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಇನ್‌ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲೂ ಮೆಟಾ ಹಲವು ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಅಪ್ರಾಪ್ತ ಬಳಕೆದಾರರಿಗೆ ಡೀಫಾಲ್ಟ್ ಸಮಯ ಮಿತಿಗಳು ಹಾಗೂ ರಾತ್ರಿ ಸಮಯದ ಬಳಕೆ ನಿರ್ಬಂಧ ಸೇರಿದಂತೆ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ.

0 Comments