Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಜೋಡುಕಲ್ಲು ಗಣೇಶೋತ್ಸವ ಸ್ಥಳ ವಿವಾದ : ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೇಲೆ ಅಸಭ್ಯ ವರ್ತನೆ ಆರೋಪ; ಕುಂಬಳೆ ಮಂಡಲ ಬಿಜೆಪಿ ತೀವ್ರ ಖಂಡನೆ

ಕುಂಬಳೆ : ಮಂಗಲ್ಪಾಡಿ ಪಂಚಾಯಿತಿಯ ಜೋಡುಕಲ್ಲು ಪ್ರದೇಶದಲ್ಲಿ ಸಾರ್ವಜನಿಕ ಗಣೇಶೋತ್ಸವ ನಡೆಸುವ ಸ್ಥಳಕ್ಕೆ ಸಂಬಂಧಿಸಿದ ವಿವಾದ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೊಂಡಾ ಅವರೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಜೋಡುಕಲ್ಲು ಶಿಶುಮಂದಿರದ ಪಕ್ಕದಲ್ಲಿರುವ ಸ್ಥಳಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆಯ  ಕಚೇರಿಗೆ ಅರ್ಜಿ ಸಲ್ಲಿಸಲು ಲೋಕೇಶ್ ನೊಂಡಾ ತೆರಳಿದ್ದ ಸಂದರ್ಭದಲ್ಲಿ, ಮುಸ್ಲಿಂ ಲೀಗ್ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯ ನಡುವೆ ಅವರೊಂದಿಗೆ ಅಸಭ್ಯವಾಗಿ ವರ್ತಿಸಿ, ಅಂಗಿಯ ಕಾಲರ್ ಹಿಡಿದು ಮೈಗೆ ಕೈ ಹಾಕಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಘಟನೆಗೆ ಸಂಬಂಧಿಸಿದ ದೃಶ್ಯಗಳು ವೀಡಿಯೋದಲ್ಲಿ ಕಂಡುಬರುತ್ತವೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಕುಂಬಳೆ ಮಂಡಲ ಸಮಿತಿ ಅಧ್ಯಕ್ಷ ಬಿ. ವಿಕ್ರಂಪೈ, ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಇದರ ಹಿಂದೆ ಸಂಘಟಿತ ಉದ್ದೇಶವಿದೆಯೇ ಎಂಬ ಬಗ್ಗೆ ಪರಿಶೀಲನೆ ಅಗತ್ಯ ಎಂದು ಹೇಳಿದ್ದಾರೆ.

ಸ್ಥಳಕ್ಕೆ ಸಂಬಂಧಿಸಿದ ಹಳೆಯ ದಾಖಲೆಗಳು ಹಾಗೂ ಮನವಿಗಳು ಪಕ್ಷದ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ. 1991ರಲ್ಲಿಯೇ ಈ ಸ್ಥಳವನ್ನು ಸೇವಾ ಭಾರತಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸಲು ಅನುಮತಿ ನೀಡುವಂತೆ ತಹಸೀಲ್ದಾರ್ ಹಾಗೂ ವಿಲೇಜ್ ಕಚೇರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸಂಬಂಧಿಸಿದ ದಾಖಲೆಗಳು ತಮ್ಮ ಬಳಿ ಇರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಇದೀಗ ಇದೇ ಸ್ಥಳವನ್ನು ಅತಿಕ್ರಮಣದ ಮೂಲಕ ವಶಪಡಿಸಿಕೊಳ್ಳಲು ಕೆಲವು ಸಂಘಟನೆಗಳು ಪ್ರಯತ್ನಿಸುತ್ತಿವೆ ಎಂಬ ಆರೋಪವನ್ನು ಬಿಜೆಪಿ ಮಂಡಲ ಸಮಿತಿ ಮಾಡಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿಪಡಿಸುವ ಯಾವುದೇ ಪ್ರಯತ್ನವನ್ನು ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಎದುರಿಸುವುದಾಗಿ ಪಕ್ಷ ಎಚ್ಚರಿಕೆ ನೀಡಿದೆ.

“ಈ ಘಟನೆಯನ್ನು ಸಣ್ಣ ವಿಚಾರವೆಂದು ಪರಿಗಣಿಸಿ ಕೈಬಿಡುವುದಿಲ್ಲ. ಸ್ಥಳದ ಹಕ್ಕು, ಲಭ್ಯವಿರುವ ದಾಖಲೆಗಳು ಹಾಗೂ ಸಾರ್ವಜನಿಕ ಧಾರ್ಮಿಕ ಕಾರ್ಯಕ್ರಮಗಳ ನಿರಂತರತೆಗೆ ಸಂಬಂಧಿಸಿದಂತೆ ಅಗತ್ಯವಿರುವ ಎಲ್ಲ ಕಾನೂನುಬದ್ಧ ಹೋರಾಟವನ್ನು ಮುಂದುವರಿಸಲಾಗುವುದು” ಎಂದು ವಿಕ್ರಂಪೈ ತಿಳಿಸಿದ್ದಾರೆ.

ಲೋಕೇಶ್ ನೊಂಡಾ ಅವರಿಗೆ ಕುಂಬಳೆ ಮಂಡಲ ಬಿಜೆಪಿಯ ಸಂಪೂರ್ಣ ಬೆಂಬಲವಿದ್ದು, ಮುಂದಿನ ಹಂತದಲ್ಲಿ ಪಕ್ಷದ ವತಿಯಿಂದ ಅಗತ್ಯ ಕಾನೂನು ಹಾಗೂ ಪ್ರಜಾಸತ್ತಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಅದೇ ವೇಳೆ, ಯಾವುದೇ ಸಂಘಟನೆಗಳ ವಿರುದ್ಧ ವೈಷಮ್ಯಕ್ಕೆ ಅವಕಾಶ ನೀಡದೆ, ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಹಕ್ಕುಗಳಿಗಾಗಿ ಪ್ರಜಾಸತ್ತಾತ್ಮಕ ಹೋರಾಟ ನಡೆಸುವುದು ಪಕ್ಷದ ನಿಲುವು ಎಂದು ವಿಕ್ರಂಪೈ ಸ್ಪಷ್ಟಪಡಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement