Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಸೆ.13ರಂದು ಉಕ್ಕಿನಡ್ಕದಲ್ಲಿ ನವಜೀವನೋತ್ಸವ : ಕೆಸರಿನಲ್ಲಿ ಜಾನಪದ ಕ್ರೀಡೆ, ಸಾಂಸ್ಕೃತಿಕ ಸಂಭ್ರಮ

ಪೆರ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.), ವೈಶಾಲಿ ನವಜೀವನ ಸಮಿತಿ ಪೆರ್ಲ ವಲಯ, ಶೌರ್ಯ ಘಟಕ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಹಾಗೂ ಜ್ಞಾನವಿಕಾಸ ಕೇಂದ್ರ ಪೆರ್ಲ ವಲಯದ ಸಹಯೋಗದಲ್ಲಿ ನವಜೀವನೋತ್ಸವ–ಕೆಸರಿನಲ್ಲಿ ಜಾನಪದ ಕ್ರೀಡೆ ಹಾಗೂ ಸಾಂಸ್ಕೃತಿಕ ಸಂಭ್ರಮ ಸೆಪ್ಟೆಂಬರ್ 13ರಂದು ಉಕ್ಕಿನಡ್ಕ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆಯಲಿದೆ.

ಪರಮಪೂಜ್ಯ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಶುಭಾಶೀರ್ವಾದದೊಂದಿಗೆ ನಡೆಯಲಿರುವ ಕಾರ್ಯಕ್ರಮವು ಬೆಳಗ್ಗೆ 8.30ಕ್ಕೆ ಉದ್ಘಾಟನಾ ಸಮಾರಂಭದೊಂದಿಗೆ ಆರಂಭಗೊಳ್ಳಲಿದೆ.

ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾವತಿ ಟೀಚರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಉದ್ಯಮಿ ಉದಯ ಚೆಟ್ಟಿಯಾರ್ ಬಜಕೂಡ್ಲು ಕ್ರೀಡೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.  ಪೆರ್ಲ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ಬಿ.ಪಿ. ಶೇಣಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ಕರಾವಳಿ ಪ್ರಾದೇಶಿಕ ವಿಭಾಗ ಉಡುಪಿ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ ಆಚಾರ್ಯ, ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಆಯಿಷಾ ಎ.ಎ., ಮಂಜೇಶ್ವರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ ಆಳ್ವ, ಪೆರ್ಲ ವಲಯ ಜನಜಾಗೃತಿ ವೇದಿಕೆ ಸದಸ್ಯ ಸತೀಶ್ ಚಂದ್ರ ಭಂಡಾರಿ ಕೋಳಾರು, ಮಂಜೇಶ್ವರ ತಾಲೂಕು ಶೌರ್ಯ ವಿಪತ್ತು ಘಟಕದ ಮಾಸ್ಟರ್ ಪ್ರಸಾದ್ ಮಣಿಯಂಪಾರೆ, ವೈಶಾಲಿ ನವಜೀವನ ಸಮಿತಿ ಪೆರ್ಲ ವಲಯ ಕಾರ್ಯದರ್ಶಿ ರಘು ಪೂಜಾರಿ, ದೇವಣ್ಣ ನಾಯ್ಕ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಬೆಳಗ್ಗೆ 10 ಗಂಟೆಯಿಂದ ಮಹಿಳೆಯರು, ಪುರುಷರು ಹಾಗೂ ಮಕ್ಕಳಿಗೆ ಪ್ರತ್ಯೇಕವಾಗಿ ಕೆಸರುಗದ್ದೆಯಲ್ಲಿ ವಿಭಿನ್ನ ಕ್ರೀಡಾ ಸ್ಪರ್ಧೆಗಳು, ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. ಹಾಲೆಯಲ್ಲಿ ಕುಳಿತು ಎಳೆಯುವುದು, ನಿಂಬೆ ಚಮಚ, 100 ಮೀಟರ್ ಓಟ, ಮೂರು ಕಾಲಿನ ಓಟ, ರಿವರ್ಸ್ ವಾಕಿಂಗ್, ಮಡಕೆ ಹೊಡೆಯುವುದು, ಹಗ್ಗಜಗ್ಗಾಟ, ನೀರು ತುಂಬಿಸುವುದು, ಬಾಲ್‌ಪಾಸ್, ಪಿರಮಿಡ್ ಸೇರಿದಂತೆ ಹಲವು ಸ್ಪರ್ಧೆಗಳು ಆಯೋಜಿಸಲಾಗಿದೆ.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಕೆಸರುಗದ್ದೆಯಲ್ಲಿ ನಿಧಿಶೋಧ ಸ್ಪರ್ಧೆ ನಡೆಯಲಿದ್ದು, ಗ್ರಾಮೀಣ ಕ್ರೀಡಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ. ವಿಶೇಷವಾಗಿ ಹಗ್ಗಜಗ್ಗಾಟ ಸ್ಪರ್ಧೆಗೆ ಸ್ಥಳದಲ್ಲಿಯೇ ತಂಡಗಳನ್ನು ರಚಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ಸಂಜೆ 5.30 ಗಂಟೆಯಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ವೈಶಾಲಿ ನವಜೀವನ ಸಮಿತಿ ಪೆರ್ಲ ವಲಯದ ಅಧ್ಯಕ್ಷ ಜಗದೀಶ ಪರ್ತಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ದಕ್ಷಿಣ ಕನ್ನಡ ಜಿಲ್ಲೆ–2ರ ನಿರ್ದೇಶಕ ಬಾಬು ನಾಯ್ಕ ಭಾಗವಹಿಸಲಿದ್ದಾರೆ. ಎಣ್ಮಕಜೆ ಗ್ರಾಮ ಪಂಚಾಯತ್ ಸದಸ್ಯ ಸದಾನಂದ ಶೆಟ್ಟಿ ಕುದ್ವ, ಜನಜಾಗೃತಿ ವೇದಿಕೆ ಕಾಸರಗೋಡು ತಾಲೂಕು ಅಧ್ಯಕ್ಷ ಜಯರಾಮ ಪಾಟಾಳಿ ಪಡುಮಲೆ, ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಪೆರ್ಲ ವಲಯ ಅಧ್ಯಕ್ಷ ಶ್ರೀಧರ ಮಣಿಯಾಣಿ, ಉಕ್ಕಿನಡ್ಕ ಸಹಸ್ರಾಕ್ಷ ಆಯುರ್ವೇದಿಕ್ ಆಸ್ಪತ್ರೆಯ ಡಾ. ಸಪ್ನಾ ಜಯ ಗೋವಿಂದ, ಬದಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್, ಸ್ಥಳ ಒದಗಿಸಿದ ಅಬ್ದುಲ್ ರಹೀಮಾನ್ ಉಕ್ಕಿನಡ್ಕ ಹಾಗೂ ಸಹಕರಿಸಿದ ಎಂ.ಎ. ಶರೀಫ್ ಉಕ್ಕಿನಡ್ಕ ಉಪಸ್ಥಿತರಿರುವರು.

ಗ್ರಾಮೀಣ ಬದುಕಿನ ಸೊಗಡನ್ನು ಬಿಂಬಿಸುವ ಜಾನಪದ ಕ್ರೀಡೆಗಳು, ಕೆಸರುಗದ್ದೆಯಲ್ಲಿನ ವಿಶಿಷ್ಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಸಂಭ್ರಮದ ಮೂಲಕ ನವಜೀವನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement