ಪೆರ್ಮುದೆ : ಸವಿ ಹೃದಯದ ಕವಿಮಿತ್ರರು ವೇದಿಕೆ, ಪೆರ್ಲ ಹಾಗೂ ಶಂಪಾ ಪ್ರತಿಷ್ಠಾನ (ರಿ.), ಬೆಂಗಳೂರು ಇವರ ಸಹಯೋಗದಲ್ಲಿ ಚೇವಾರಿನ ‘ನಿಸರ್ಗಧಾಮ’ದಲ್ಲಿ ನಡೆದ “ಶ್ರಾವಣ ಚಿಣ್ಣರ ಲೋಕ–ಸಾಹಿತ್ಯ ಸಂವಹನ ಹಾಗೂ ಪ್ರದರ್ಶನ” ಕಾರ್ಯಕ್ರಮ ಹೊಸ ಚಿಗುರು ಹಳೆ ಬೇರು ಸಂಗಮಕ್ಕೆ ಸಾಕ್ಷಿಯಾಯಿತು. ಕಾರ್ಯಕ್ರಮವನ್ನು ರಕ್ಷಾ ಕೆಜಕ್ಕಾರು ಉದ್ಘಾಟಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸೋಮಣ್ಣ ಬೇವಿನಮರದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಅವರ ಸೃಜನಶೀಲತೆಗೆ ಪ್ರೋತ್ಸಾಹ ನೀಡುತ್ತಿರುವುದಲ್ಲದೆ ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯೊಂದಿಗೆ ಮಕ್ಕಳನ್ನು ಬೆಳೆಸುವ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
“ಚಿಣ್ಣರ ಪ್ರತಿಭೆಯನ್ನು ಕೇವಲ ಶಾಲಾ ಪಠ್ಯಕ್ಕೆ ಸೀಮಿತಗೊಳಿಸದೆ, ಸಾಹಿತ್ಯ, ಕಲೆ, ಚಿತ್ರಕಲೆ, ಭಾಷೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ನೀಡಬೇಕು. ಮಕ್ಕಳ ಪ್ರತಿಭೆಗೆ ದೊರೆಯುವ ಪ್ರೋತ್ಸಾಹವೇ ಅವರ ಭವಿಷ್ಯದ ಸಾಧನೆಗೆ ಭದ್ರ ಬುನಾದಿಯಾಗುತ್ತದೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುವುದರ ಜೊತೆಗೆ ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲಿನ ಅಭಿಮಾನವನ್ನೂ ಹೆಚ್ಚಿಸುತ್ತವೆ” ಎಂದು ಅವರು ಹೇಳಿದರು.
ಶಂಪಾ ಪ್ರತಿಷ್ಠಾನ, ಬೆಂಗಳೂರಿನ ಸ್ಥಾಪಕಾಧ್ಯಕ್ಷೆ ಹಾಗೂ ವಿಶ್ರಾಂತ ಪ್ರಾಧ್ಯಾಪಕಿ ಡಾ. ಪ್ರಮೀಳಾ ಮಾಧವ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಶಿವರೆಡ್ಡಿ ಕೊಪ್ಪಳ, ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಪಿ.ಎನ್. ಮೂಡಿತ್ತಾಯ, ಕ.ಸಾ.ಪ. ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಪತ್ರಕರ್ತ ಹಾಗೂ ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಶಂಪಾ ಪ್ರತಿಷ್ಠಾನದ ಸಂಚಾಲಕಿ ಡಾ. ಮಹೇಶ್ವರಿ ಉಳ್ಳೋಡಿ, ಸಾಹಿತಿ ಹರೀಶ್ ಸುಲಾಯ ಒಡ್ಡಂಬೆಟ್ಟು, ಹರೀಶ್ ಪೆರ್ಲ, ಸವಿ ಹೃದಯದ ಕವಿಮಿತ್ರರು ವೇದಿಕೆ, ಪೆರ್ಲ ಇದರ ಸಂಚಾಲಕ ಸುಭಾಷ್ ಪೆರ್ಲ, ಕತೆಗಾರ್ತಿ ಸ್ನೇಹಲತಾ ದಿವಾಕರ್, ನಿವೃತ್ತ ಮುಖ್ಯೋಪಾಧ್ಯಾಯರಾದ ವಿ ಬಿ ಕುಳಮರ್ವ, ಶಿವ ಪಡ್ರೆ, ಬಾಲ ಮಧುರ ಕಾನನ, ಚಿತ್ರ ಕಲಾವಿದ ಶಿಕ್ಷಕ ಜಯ ಪ್ರಕಾಶ್ ಶೆಟ್ಟಿ, ಸುಮಿತ್ರ ಎರ್ಪಕಟ್ಟೆ, ಚಂದ್ರಹಾಸ ಅರೆಕ್ಕಾಡಿ, ಬಾಲಕೃಷ್ಣ ನಾಯ್ಕ ಏಳ್ಕಾನ, ಜಾನ್ ಡಿ ಸೋಜ ಕಯ್ಯಾರ್, ಸಂಘಟಕರು ಶಶಿಕಲಾ ಪಟೇಲ್ ಬಾಳೆಗುಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಹಿತಿಗಳು, ಕವಿಗಳು, ಪತ್ರಕರ್ತರು, ಶಿಕ್ಷಕರು, ಚಿತ್ರಗಾರರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿ ಚಿಣ್ಣರ ಪ್ರತಿಭೆಯನ್ನು ಪ್ರೋತ್ಸಾಹಿಸಿದರು. ಹಲವು ಮಕ್ಕಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

0 Comments