Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ರಂಗಚಾವಡಿಯ ಕಲಾ ವೈಭವಕ್ಕೆ ಮಾರುಹೋದ ವೀರಮಂಗಲದ ಮಕ್ಕಳು

ವೀರಮಂಗಲ : ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ರಂಗಚಾವಡಿ ಬಳಗದ ವತಿಯಿಂದ ನಡೆದ ರಂಗಚಟುವಟಿಕೆಗಳು ಶಾಲಾ ಆವರಣವನ್ನು ಕಲೆಯ ಸಂಭ್ರಮದಿಂದ ತುಂಬಿದವು. ಪಾಠನಾಟಕ, ಹಾಡು, ಅಭಿನಯ ಹಾಗೂ ರಂಗಪರಿಕರಗಳ ಬಳಕೆಯೊಂದಿಗೆ ನಡೆದ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು, ಪ್ರತಿಯೊಂದು ಕ್ಷಣವನ್ನೂ ಖುಷಿಯಿಂದ ಆನಂದಿಸಿದರು.

ವೇದಿಕೆಯಲ್ಲಿ ಕಲಾವಿದರು ಪಾತ್ರಗಳಿಗೆ ಜೀವ ತುಂಬುತ್ತಿದ್ದಂತೆ, ಮಕ್ಕಳು ಕುತೂಹಲದಿಂದ ಕಣ್ತುಂಬಿಕೊಂಡರು. ಕೆಲವೊಮ್ಮೆ ನಗುತ್ತಾ, ಕೆಲವೊಮ್ಮೆ ಚಪ್ಪಾಳೆ ತಟ್ಟುತ್ತಾ, ಮತ್ತೊಮ್ಮೆ ಪಾತ್ರಗಳೊಂದಿಗೆ ತಾವೂ ಒಂದಾದಂತೆ ಸಂಭ್ರಮಿಸುತ್ತಾ ರಂಗದ ಪ್ರತಿಯೊಂದು ದೃಶ್ಯಕ್ಕೂ ಮಕ್ಕಳಿಂದ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಯಿತು. ತರಗತಿಯ ನಾಲ್ಕು ಗೋಡೆಗಳೊಳಗಿನ ಕಲಿಕೆ, ರಂಗದ ಮೇಲೆ ಕಣ್ಣೆದುರು ಜೀವಂತವಾಗಿದ್ದುದನ್ನು ಕಂಡ ಮಕ್ಕಳು ಅಪಾರ ಸಂತೋಷಪಟ್ಟರು.

ದುಶ್ಚಟಗಳ ವಿರುದ್ಧದ ನಾಟಕ ಮಕ್ಕಳಲ್ಲಿ ಜಾಗೃತಿ ಮೂಡಿಸಿದರೆ, ಮೊಬೈಲ್ ದುರ್ಬಳಕೆಯ ಪರಿಣಾಮ ಕುರಿತ ನಾಟಕ ಇಂದಿನ ಜೀವನದ ವಾಸ್ತವತೆಯನ್ನು ಮನಮುಟ್ಟುವಂತೆ ತೆರೆದಿಟ್ಟಿತು. ‘ತಿಂಗಳು ಬೆಳಕಿನ ಇರುಳಿನಲ್ಲಿ’, ‘ಹಕ್ಕಿಗಳ ಹಾಡು’ ಸೇರಿದಂತೆ ವಿವಿಧ ರಂಗಪ್ರಸ್ತುತಿಗಳು ಮಕ್ಕಳ ಕಲ್ಪನಾ ಲೋಕಕ್ಕೆ ಹೊಸ ಬಣ್ಣ ತುಂಬಿದವು.

ಹಾಡು, ಸಂಭಾಷಣೆ, ಅಭಿನಯ, ಬೆಳಕು ಮತ್ತು ರಂಗಪರಿಕರಗಳ ಸೊಗಸಾದ ಸಂಯೋಜನೆಗೆ ಮಕ್ಕಳು ಚಪ್ಪಾಳೆ, ನಗು ಹಾಗೂ ಹರ್ಷೋದ್ಗಾರಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮ ಮುಗಿದರೂ ಮಕ್ಕಳ ಮುಖದಲ್ಲಿದ್ದ ಸಂತಸದ ನಗು ಮತ್ತು ರಂಗದ ಅನುಭವದ ಗುಂಗು ಬಹುಕಾಲ ಉಳಿಯುವಂತಿತ್ತು.

ಈ ಅಪೂರ್ವ ರಂಗಾನುಭವಕ್ಕೆ ಕೃಷ್ಣಪ್ಪ ಬಂಬಿಲ ನಿರ್ದೇಶನ ನೀಡಿದರು. ಭವಾನಿ ಕಾಂಚನ, ಪುಷ್ಪರಾಜ್ ಏನೆಕಲ್ಲು, ಅರ್ಪಿತ ಚೊಕ್ಕಾಡಿ, ಅಶೋಕ ಉಪ್ಪಿನಂಗಡಿ ಹಾಗೂ ಸಹನಾ ನೆಕ್ಕರೆ ಸಹಕರಿಸಿದರು.

ಮುಖ್ಯಗುರು ತಾರಾನಾಥ ಸವಣೂರು ಅವರ ಆಯೋಜನೆಯಲ್ಲಿ ಹಾಗೂ ಶಿಕ್ಷಕ ವೃಂದದ ಸಹಕಾರದೊಂದಿಗೆ ನಡೆದ ಈ ಕಾರ್ಯಕ್ರಮವು ಮಕ್ಕಳಿಗೆ ಕೇವಲ ಮನರಂಜನೆಯಾಗಿರದೆ, ನಗುವಿನೊಂದಿಗೆ ಕಲಿಯುವ, ಅಭಿನಯದೊಂದಿಗೆ ಬದುಕಿನ ಮೌಲ್ಯಗಳನ್ನು ಅರಿಯುವ ಮರೆಯಲಾಗದ ಅನುಭವವಾಗಿ ಮೂಡಿಬಂತು. ರಂಗದ ಮೇಲೆ ಮೂಡಿದ ಪಾತ್ರಗಳು,ಮಕ್ಕಳ ಕಣ್ಣಲ್ಲಿ ಮೂಡಿದ ಕನಸುಗಳು ಚಪ್ಪಾಳೆಯ ಸದ್ದಿನಲ್ಲಿ ಅರಳಿದ ನಗು ಕಾರ್ಯಕ್ರಮದ ಯಶಸ್ವಿಗೆ ಸಾಕ್ಷಿಯಾಯಿತು.

Post a Comment

0 Comments

ಜಾಹೀರಾತು

Responsive Advertisement