ಮಂಗಳೂರು: ತುಳು ಭಾಷೆಗೆ ರಾಜ್ಯ ಸರ್ಕಾರ ಆಡಳಿತ ಭಾಷೆಯಾಗಿ ಎರಡನೇ ಸ್ಥಾನಮಾನ ನೀಡಿರುವುದು ತುಳುನಾಡಿನ ಜನತೆಗೆ ಐತಿಹಾಸಿಕ ಹಾಗೂ ಸಂಭ್ರಮದ ಕ್ಷಣವಾಗಿದೆ ಎಂದು ರಾಜಕೇಸರಿ ಸೇವಾ ಟ್ರಸ್ಟ್‌ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಂತೋಷ್ ಕುಮಾರ್ ಕೊಲ್ಯ ಹೇಳಿದರು. ತುಳುವಿಗೆ ಅಧಿಕೃತ ಸ್ಥಾನಮಾನ ನೀಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ರಾಜ್ಯ ಸಚಿವ ಸಂಪುಟಕ್ಕೆ ವೈಯಕ್ತಿಕವಾಗಿ ಹಾಗೂ ರಾಜಕೇಸರಿ ಸೇವಾ ಟ್ರಸ್ಟ್ ಪರವಾಗಿ ಅಭಿನಂದನೆ ಸಲ್ಲಿಸಿದ ಅವರು, ಈ ನಿರ್ಧಾರಕ್ಕಾಗಿ ಹಲವು ವರ್ಷಗಳಿಂದ ಹೋರಾಡಿದ ತುಳುಪರ ಸಂಘಟನೆಗಳು, ಸಾಹಿತಿಗಳು, ರಂಗಕರ್ಮಿಗಳು, ಚಿತ್ರರಂಗದವರು ಹಾಗೂ ಹೋರಾಟಗಾರರ ಶ್ರಮವನ್ನು ಸ್ಮರಿಸಬೇಕಾಗಿದೆ ಎಂದರು.
ತುಳು ಭಾಷೆಯ ಮಾನ್ಯತೆಗಾಗಿ ಹಿಂದಿನ ಸರ್ಕಾರಗಳ ಅವಧಿಯಲ್ಲಿಯೂ ಪ್ರಯತ್ನಗಳು ನಡೆದಿವೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾಗಿದ್ದ ಸುನಿಲ್ ಕುಮಾರ್ ಅವರ ಮುತುವರ್ಜಿಯಲ್ಲಿ ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಸಿದ್ಧಪಡಿಸಲಾಗಿತ್ತು. ಈ ಹಿಂದಿನ ಪ್ರಯತ್ನಗಳನ್ನೂ ಗೌರವದಿಂದ ಸ್ಮರಿಸಬೇಕು ಎಂದು ಹೇಳಿದರು. ತುಳು ಭಾಷೆಗೆ ದೊರೆತಿರುವ ಈ ಸ್ಥಾನಮಾನ ಯಾವುದೇ ಜಾತಿ, ಧರ್ಮ, ಪಕ್ಷ ಅಥವಾ ಪಂಥದ ಭೇದವಿಲ್ಲದೆ ತುಳುನಾಡಿನ ಜನರು ಒಗ್ಗಟ್ಟಾಗಿ ಸಂಭ್ರಮಿಸಬೇಕಾದ ಕ್ಷಣವಾಗಿದೆ. ಮುಂದಿನ ಹಂತದಲ್ಲಿ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಸಂತೋಷ್ ಕುಮಾರ್ ಕೊಲ್ಯ ಆಗ್ರಹಿಸಿದರು. ಇದೇ ವೇಳೆ ತುಳುನಾಡಿನ ನೇತ್ರಾವತಿ ನದಿ ತಿರುವು ಯೋಜನೆ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು. ತುಳುನಾಡಿನ ಜನರ ಪ್ರಮುಖ ಬೇಡಿಕೆಗಳಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಅವರು ಮನವಿ ಮಾಡಿದರು.

0 Comments