ಕೋಝಿಕ್ಕೋಡು : ಕಾಲಿಕೆಟ್ ಎಫ್‌ಸಿ ತಂಡದ ಯುವ ಪುಟ್ಬಾಲ್ ಆಟಗಾರ ರಿಜೋನ್ ಜೋಸ್ (29) ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತ್ರಿಶೂರ್ ಮೂಲದ ರಿಜೋನ್ ಜೋಸ್, ಭಾನುವಾರ ರಾತ್ರಿ ಕ್ರಿಶ್ಚಿಯನ್ ಕಾಲೇಜು ಸಮೀಪ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು.
ರಿಜೋನ್ ಜೋಸ್ ಹಾಗೂ ಸಂತೋಷ್ ಟ್ರೋಫಿ ಆಟಗಾರ ಗನಿ ಅಹ್ಮದ್ ನಿಗಮ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟಿದ್ದು, ಇತರ ವಾಹನ ಸವಾರರು ಅವರನ್ನು ಕೊಝಿಕ್ಕೋಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಧ್ಯರಾತ್ರಿ 12ರ ಸುಮಾರಿಗೆ ರಿಜೋನ್ ಜೋಸ್ ಮೃತಪಟ್ಟಿದ್ದಾರೆ. ಗನಿ ಅಹ್ಮದ್ ನಿಗಮ್ ಅವರ ಕಾಲಿಗೆ ಗಾಯವಾಗಿದ್ದು, ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ತಿಳಿದುಬಂದಿದೆ.
ಸೂಪರ್ ಲೀಗ್‌ನ ಹೊಸ ಋತುವಿನ ಪಂದ್ಯಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಾಗ ರಿಜೋನ್ ಜೋಸ್ ಅವರ ನಿಧನ ಕ್ರೀಡಾ ವಲಯಕ್ಕೆ ಆಘಾತ ಉಂಟುಮಾಡಿದೆ. ಈ ಹಿಂದೆ ಅವರು ಫೋರ್ಸಾ ಕೊಚ್ಚಿ, ಎಫ್‌ಸಿ ಡೆಕ್ಕಾನ್, ವಯನಾಡ್ ಯುನೈಟೆಡ್ ಹಾಗೂ ಜಾರ್ಜ್ ಟೆಲಿಗ್ರಾಫ್ ತಂಡಗಳ ಪರವೂ ಆಡಿದ್ದರು.

0 Comments