ಮಂಗಳೂರು : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-75ರ ನೆಲ್ಯಾಡಿ ಗ್ರಾಮದ ಬೆಥನಿ ಕಾಲೇಜು ಬಳಿ ಸರಣಿ ಅಪಘಾತ ಸಂಭವಿಸಿದ್ದು, ಮದ್ಯದ ಲೋಡ್ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿದೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿದ್ದು, ಲಾರಿ ಚಾಲಕ ಗಾಯಗೊಂಡಿದ್ದಾರೆ.
ಸಕಲೇಶಪುರದಿಂದ ಮಂಗಳೂರು ಕಡೆಗೆ ಮದ್ಯದ ಲೋಡ್ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಮತ್ತೊಂದು ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ನಿಯಂತ್ರಣ ಕಳೆದುಕೊಂಡ ಮದ್ಯದ ಲಾರಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಉಜ್ಜಿಕೊಂಡು ಬಳಿಕ ರಸ್ತೆ ಬದಿಗೆ ಪಲ್ಟಿಯಾಗಿದೆ.
ಅಪಘಾತದಲ್ಲಿ ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮದ್ಯದ ಬಾಟಲಿಗಳು ಹಾನಿಗೊಳಗಾಗಿವೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸ್ಥಳಕ್ಕೆ ನೆಲ್ಯಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಮಾಲೀಕ ರಾಜ ಎಂ. ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

0 Comments