ನವದೆಹಲಿ : ದೇಶದ ಎಲ್ಲಾ ಬ್ಯಾಂಕ್‌ಗಳು ಸೆಪ್ಟೆಂಬರ್ 27ರಂದು ಭಾನುವಾರ ಕಾರ್ಯನಿರ್ವಹಿಸಲಿವೆ. ಸೆಪ್ಟೆಂಬರ್ 28ರಿಂದ ಮೂರು ದಿನಗಳ ಬ್ಯಾಂಕ್ ನೌಕರರ ಮುಷ್ಕರ ನಡೆಯಲಿರುವ ಹಿನ್ನೆಲೆಯಲ್ಲಿ, ಕೇಂದ್ರ ಹಣಕಾಸು ಸಚಿವಾಲಯದ ಸೂಚನೆಯಂತೆ ಭಾನುವಾರವೂ ಬ್ಯಾಂಕ್‌ಗಳನ್ನು ತೆರೆಯಲು ನಿರ್ಧರಿಸಲಾಗಿದೆ.
ಸೆಪ್ಟೆಂಬರ್ 28ರಿಂದ 30ರವರೆಗೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಷ್ಕರಕ್ಕೆ ಕರೆ ನೀಡಿದೆ. ಸೆಪ್ಟೆಂಬರ್ 26 ನಾಲ್ಕನೇ ಶನಿವಾರವಾಗಿರುವುದರಿಂದ ಬ್ಯಾಂಕ್‌ಗಳಿಗೆ ರಜೆ ಇದ್ದು, ಅದರ ನಂತರ ಮೂರು ದಿನಗಳ ಮುಷ್ಕರ ನಡೆಯುವುದರಿಂದ ಸತತ ಐದು ದಿನ ಬ್ಯಾಂಕ್‌ಗಳು ಮುಚ್ಚುವ ಪರಿಸ್ಥಿತಿ ಎದುರಾಗಿತ್ತು. ಇದನ್ನು ತಪ್ಪಿಸಲು ಸೆ.27ರಂದು ಬ್ಯಾಂಕ್‌ಗಳನ್ನು ತೆರೆಯಲು ಸೂಚಿಸಲಾಗಿದೆ.
ಭಾನುವಾರ ಬ್ಯಾಂಕ್ ಶಾಖೆಗಳ ಜತೆಗೆ ಕಚೇರಿಗಳು ಹಾಗೂ ಎಟಿಎಂ ಸಂಪರ್ಕಿತ ಶಾಖೆಗಳೂ ಕಾರ್ಯನಿರ್ವಹಿಸಲಿವೆ. ಈ ಕುರಿತು ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.
ವಾರದ ಐದು ದಿನಗಳ ಕೆಲಸದ ವ್ಯವಸ್ಥೆ ಜಾರಿ, ಕೆಲಸದ ಒತ್ತಡ ಕಡಿತ ಹಾಗೂ ಹೆಚ್ಚಿನ ನೇಮಕಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಬ್ಯಾಂಕ್ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಯಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸಲು ನೌಕರರು ನಿರ್ಧರಿಸಿದ್ದಾರೆ.
ಬೇಡಿಕೆಗಳಿಗೆ ಅನುಕೂಲಕರ ಸ್ಪಂದನೆ ದೊರೆಯದಿದ್ದರೆ ಅಕ್ಟೋಬರ್ 26ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಸಂಘಟನೆಗಳು ಎಚ್ಚರಿಕೆ ನೀಡಿವೆ.
ಬ್ಯಾಂಕ್‌ಗಳು ಕಾರ್ಯನಿರ್ವಹಿಸದ ದಿನಗಳಲ್ಲಿಯೂ ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಯುಪಿಐ ಹಾಗೂ ಇತರ ಡಿಜಿಟಲ್ ಸೇವೆಗಳು ಲಭ್ಯವಿರುತ್ತವೆ. ಆದರೆ ಬ್ಯಾಂಕ್‌ಗೆ ನೇರವಾಗಿ ತೆರಳಿ ಪಡೆಯಬೇಕಾದ ಸೇವೆಗಳು ಹಾಗೂ ಚೆಕ್‌ಗಳಿಗೆ ಸಂಬಂಧಿಸಿದ ವಹಿವಾಟುಗಳು ಸ್ಥಗಿತಗೊಳ್ಳುವ ಸಾಧ್ಯತೆಯಿದೆ.

0 Comments