ಉಡುಪಿ : ಶಾರ್ಜಾದಲ್ಲಿ ಹತ್ಯೆಗೀಡಾದ ಕುಂದಾಪುರ ತಾಲೂಕಿನ ಹೊನ್ನನಕೇರಿ ನಿವಾಸಿ ಆಲ್ವಿನ್ ಪ್ರಕಾಶ್ ಕುಂದರ್ ಅವರ ಪಾರ್ಥಿವ ಶರೀರ ಶುಕ್ರವಾರ ತವರಿಗೆ ತಲುಪಿದೆ. ಪಾರ್ಥಿವ ಶರೀರವನ್ನು ಹೊನ್ನನಕೇರಿಯಲ್ಲಿರುವ ಅವರ ನಿವಾಸಕ್ಕೆ ತರಲಾಗಿದ್ದು, ಕುಟುಂಬಸ್ಥರು, ಬಂಧುಗಳು ಹಾಗೂ ಆಪ್ತರು ಅಂತಿಮ ದರ್ಶನ ಪಡೆದರು. ಬಳಿಕ ಪ್ರೊಟೆಸ್ಟಂಟ್ ಸಿ.ಎಸ್.ಐ. ಕೃಪಾ ಚರ್ಚ್‌ನಲ್ಲಿ ಅಂತಿಮ ವಿಧಿವಿಧಾನಗಳನ್ನು ನಡೆಲಾಯಿತು. ಆಲ್ವಿನ್ ಅವರ ಅಪ್ಪ-ಅಮ್ಮನ ಸಮಾಧಿ ಪಕ್ಕದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಆಲ್ವಿನ್ ಪ್ರಕಾಶ್ ಕುಂದರ್ ಅವರು ಕಳೆದ ಜುಲೈನಲ್ಲಿ ಶಾರ್ಜಾದಲ್ಲಿ ನಿಗೂಢವಾಗಿ ಹತ್ಯೆಗೀಡಾಗಿದ್ದರು. ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರನೊಂದಿಗೆ ಶಾರ್ಜಾದಲ್ಲಿ ನೆಲೆಸಿದ್ದ ಅವರು ಶಾರ್ಜಾ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದರು.
ಜುಲೈ 20ರ ಸುಮಾರಿಗೆ ಸಹೋದರ ಪ್ರಶಾಂತ್ ಕುಂದರ್ ಅವರನ್ನು ಸಂಪರ್ಕಿಸಲು ಪ್ರಕಾಶ್ ಯತ್ನಿಸಿದ್ದರು ಎನ್ನಲಾಗಿದೆ. ಸಾಮಾನ್ಯವಾಗಿ ಧ್ವನಿ ಸಂದೇಶದ ಮೂಲಕ ಪ್ರತಿಕ್ರಿಯಿಸುತ್ತಿದ್ದ ಅವರು, ಈ ಬಾರಿ ಪಠ್ಯ ಸಂದೇಶದ ಮೂಲಕ ಮಾತ್ರ ಪ್ರತಿಕ್ರಿಯಿಸಿದ್ದರು. ಬಳಿಕ ಕರೆ ಮಾಡುವಂತೆ ಸಹೋದರ ಒತ್ತಾಯಿಸಿದಾಗ ಸಂಪರ್ಕ ಕಡಿತಗೊಂಡಿತ್ತು.
ಇದರಿಂದ ಆತಂಕಗೊಂಡ ಕುಟುಂಬಸ್ಥರು ವಿಚಾರಿಸಿದಾಗ, ಪ್ರಕಾಶ್ ಭಾರತಕ್ಕೆ ತೆರಳಿರುವುದಾಗಿ ಅವರು ಕೆಲಸ ಮಾಡುತ್ತಿದ್ದ ಕಂಪನಿಯಿಂದ ಮಾಹಿತಿ ದೊರೆತಿತ್ತು. ಆದರೆ ಅವರು ಭಾರತಕ್ಕೆ ಬಂದಿರುವ ಬಗ್ಗೆ ಯಾವುದೇ ಮಾಹಿತಿ ಕುಟುಂಬಕ್ಕೆ ಲಭ್ಯವಾಗದ ಹಿನ್ನೆಲೆಯಲ್ಲಿ ಶಾರ್ಜಾದಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರು ನಡೆಸಿದ ಹುಡುಕಾಟದ ವೇಳೆ ಪ್ರಕಾಶ್ ಅವರದ್ದೇ ಎನ್ನಲಾದ ಕಾರಿನಲ್ಲಿ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಇರಿತದ ಗಾಯಗಳಿದ್ದವು. ಮೃತದೇಹವನ್ನು ತುಂಡುಗಳಾಗಿ ಮಾಡಿರುವುದಾಗಿ ವರದಿಯಾಗಿದೆ.
ಈ ಪ್ರಕರಣದ ಬಳಿಕ ಪ್ರಕಾಶ್ ಅವರ ಪತ್ನಿ ಟೀನಾ ಹಾಗೂ ಅಪ್ರಾಪ್ತ ಪುತ್ರ ನಾಪತ್ತೆಯಾಗಿರುವುದು ಕುಟುಂಬಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿತ್ತು. ಪ್ರಕಾಶ್ ಮತ್ತು ಟೀನಾ ಸುಮಾರು 20 ವರ್ಷಗಳ ಹಿಂದೆ ವಿವಾಹವಾಗಿದ್ದರು. ಟೀನಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಪ್ರಕಾಶ್ ಅವರ ಸಹೋದರ ಅನಿಲ್ ನೀಡಿದ ಮಾಹಿತಿಯಂತೆ, ದುಷ್ಕರ್ಮಿಗಳು ಪ್ರಕಾಶ್ ಅವರ ಎದೆಗೆ ಚೂರಿಯಿಂದ ಇರಿದಿದ್ದು, ಕೈಬೆರಳುಗಳಿಗೂ ಗಾಯಗಳಾಗಿವೆ. ಬಳಿಕ ಮೃತದೇಹವನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿ ಒಮನ್‌ಗೆ ತೆರಳುವ ಮಾರ್ಗದಲ್ಲಿ ಬಿಟ್ಟುಹೋಗಿರುವುದಾಗಿ ಅವರು ತಿಳಿಸಿದ್ದಾರೆ. ಕಾರು ಪ್ರಕಾಶ್ ಅವರದ್ದೇ ಎಂಬುದು ದೃಢಪಟ್ಟಿದೆ ಎಂದು ಅನಿಲ್ ಹೇಳಿದ್ದಾರೆ.


0 Comments