ಮಂಗಳೂರು : ದೇವರ ಮೇಲಿನ ಭಕ್ತಿ ಮತ್ತು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಸಂಕಲ್ಪಕ್ಕೆ ವಯಸ್ಸು, ಆರ್ಥಿಕ ಸ್ಥಿತಿ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಅಶ್ವತ್ಥಮ್ಮ ಅವರೇ ಸಾಕ್ಷಿ. 80ರ ಹರೆಯದ ಅವರು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನದಾನ ಸೇವೆಗೆ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಕುಂದಾಪುರ ತಾಲೂಕಿನ ಸಾಲಿಗ್ರಾಮದಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದ ಅಶ್ವತ್ಥಮ್ಮ, ಅವರ ಅಗಲಿಕೆಯ ಬಳಿಕ ಮನೆ ತೊರೆದಿದ್ದರು. ಬಳಿಕ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಪ್ರತಿದಿನ ಪಿಗ್ಮಿ ಖಾತೆಗೆ ಜಮೆ ಮಾಡುತ್ತಾ ಬಂದಿದ್ದಾರೆ. ಉಳಿತಾಯದ ಮೊತ್ತ ಒಂದು ಲಕ್ಷ ರೂಪಾಯಿ ತಲುಪಿದಾಗ ಅದನ್ನು ದೇವಾಲಯಗಳಿಗೆ ದೇಣಿಗೆಯಾಗಿ ನೀಡುತ್ತಾ ಬಂದಿದ್ದಾರೆ.
ಈವರೆಗೆ ವಿವಿಧ ದೇವಾಲಯಗಳಿಗೆ ಇದೇ ರೀತಿ ಭಿಕ್ಷೆ ಬೇಡಿ ಸಂಗ್ರಹಿಸಿದ ಹಣದಲ್ಲಿ ಒಟ್ಟು 9 ಲಕ್ಷ ರೂ. ದೇಣಿಗೆ ನೀಡಿರುವುದು ಅವರ ಭಕ್ತಿ ಹಾಗೂ ಔದಾರ್ಯಕ್ಕೆ ಸಾಕ್ಷಿಯಾಗಿದೆ. ಸೋಮವಾರ ಬಪ್ಪನಾಡು ದೇವಸ್ಥಾನಕ್ಕೆ 1 ಲಕ್ಷ ರೂ. ದೇಣಿಗೆ ನೀಡಿದ ಅಶ್ವತ್ಥಮ್ಮ ಅವರ ಸೇವಾ ಮನೋಭಾವಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ದೇವಸ್ಥಾನದ ಅರ್ಚಕ ನರಸಿಂಹ ಭಟ್ ಅವರು ಅಶ್ವತ್ಥಮ್ಮ ಅವರಿಗೆ ದೇವರ ಆಶೀರ್ವಾದ ಸದಾ ಇರಲಿ ಎಂದು ಹಾರೈಸಿದ್ದಾರೆ.

0 Comments