ಮಂಗಳೂರು : ಪತ್ನಿಗೆ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿ ಪತಿಯೇ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಉರುಂದಾಡಿಗುಡ್ಡೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ವಿಜಯಪುರ ಜಿಲ್ಲೆಯವರಾದ ಸೊನಾಲಿ (30) ಕೊಲೆಯಾದ ಮಹಿಳೆ. ಪತಿ ಶಿವಲಿಂಗಪ್ಪ ಮಾದರ (40) ಕೊಲೆ ಆರೋಪಿಯಾಗಿದ್ದಾನೆ. ದಂಪತಿ ಉರುಂದಾಡಿಗುಡ್ಡೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಪತ್ನಿಯ ಮೇಲೆ ಸಂಶಯ ಹೊಂದಿದ್ದ ಶಿವಲಿಂಗಪ್ಪ, ಇದೇ ವಿಚಾರವಾಗಿ ಆಕೆಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ. ಭಾನುವಾರ ತಡರಾತ್ರಿ ಕೂಡ ದಂಪತಿ ನಡುವೆ ಇದೇ ವಿಚಾರಕ್ಕೆ ವಾಗ್ವಾದ ನಡೆದಿದ್ದು, ಈ ವೇಳೆ ಆಕ್ರೋಶಗೊಂಡ ಶಿವಲಿಂಗಪ್ಪ ಮನೆಯಲ್ಲಿದ್ದ ಚೂರಿಯಿಂದ ಪತ್ನಿಯ ಕುತ್ತಿಗೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಸೊನಾಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದು, ಘಟನೆ ನಡೆದ ಸಂದರ್ಭದಲ್ಲಿ ಅವರು ಶಿವಲಿಂಗಪ್ಪನ ಸಹೋದರಿಯ ಮನೆಯಲ್ಲಿದ್ದರು ಎನ್ನಲಾಗಿದೆ. ಇದೀಗ ಮಕ್ಕಳು ಅನಾಥರಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕಾವೂರು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

0 Comments