ಮಂಜೇಶ್ವರ : ವಿಜಯದಶಮಿ ಪ್ರಯುಕ್ತ ಕನಿಲ ಶ್ರೀ ಭಗವತಿ ಕ್ಷೇತ್ರದ ಭಂಡಾರ ನಿಲಯದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು. ವಿಜಯದಶಮಿಯಂದು ಶ್ರೀ ಭಗವತಿ ದೇವಿಯ ಕಟ್ಟೆ - ಮಹಾಕಾಳಿ ದೇವಿಯ ಕಟ್ಟೆಗೆ ಘೋಷಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ದಾರಿಯುದ್ದಕ್ಕೂ ಭಕ್ತರು ದೇವಿಗೆ ಧಾರಾಪೂಜೆ ನೆರವೇರಿಸಿ ದೇವಿಯ ಕೃಪೆಗೆ ಪಾತ್ರರಾದರು.
ಬಳಿಕ ಭಂಡಾರ ನಿಲಯದಲ್ಲಿ ಪಿಲಿನಲಿಕೆ ಕಾರ್ಯಕ್ರಮ ನಡೆಯಿತು. ಕ್ಷೇತ್ರದ ಮಂಜಪ್ಪ ಕಾರ್ನೋರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಕನಿಲ ಲಯನ್ಸ್ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.
ಕಳೆದ ಸುಮಾರು 50 ವರ್ಷಗಳಿಂದ ಭಂಡಾರ ನಿಲಯದಲ್ಲಿ ಪಿಲಿನಲಿಕೆ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಈ ಬಾರಿ ಕನಿಲ ಲಯನ್ಸ್ ವತಿಯಿಂದ ವೇದಿಕೆ ನಿರ್ಮಿಸಿ, ಹೆಚ್ಚಿನ ಸಂಖ್ಯೆಯ ಭಕ್ತರು ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿತ್ತು. ಈ ಸಹಕಾರಕ್ಕಾಗಿ ಆಡಳಿತ ಸಮಿತಿಯು ಕನಿಲ ಲಯನ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿ ಹುಲಿವೇಷ ಪ್ರದರ್ಶನ ನೀಡಿದ ಕಲಾವಿದರು, ಇತರ ಕಲಾವಿದರು, ಕಾರ್ಯಕ್ರಮ ನಿರೂಪಕರು ಹಾಗೂ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಆಡಳಿತ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.


0 Comments