ಬದಿಯಡ್ಕ : ಕುಂಬ್ಡಾಜೆ ಪಂಚಾಯತಿನ ತಲೆಬೈಲು ಎಂಬಲ್ಲಿನ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಕೋಳಿ ಅಂಕ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಅಂಕಕ್ಕೆ ಬಳಸಲಾದ ಆರು ಕೋಳಿಗಳು ಹಾಗೂ ಜೂಜಿಗೆ ಬಳಸಿದ 3,250 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಬದಿಯಡ್ಕ ಸಮೀಪದ ಮಾಡತ್ತಡ್ಕ ನಿವಾಸಿ ಪ್ರಮೋದ್ (43), ವಿದ್ಯಾಗಿರಿ ಕಡಾರ್ ನಿವಾಸಿ ಜಗದೀಶ ಶೆಟ್ಟಿ (58) ಹಾಗೂ ನಾರಂಪಾಡಿ ನೆಲ್ಲಿಯಡ್ಕ ನಿವಾಸಿ ಸುಕೇಶ್ (28) ಬಂಧಿತರು.
ನಿನ್ನೆ ಸಂಜೆ ಬದಿಯಡ್ಕ ಠಾಣೆಯ ಉಪನಿರೀಕ್ಷಕ ಸುನಿಲ್ ಕುಮಾರ್ ಅವರ ನೇತೃತ್ವದ ಪೊಲೀಸ್ ತಂಡ ಗಸ್ತು ನಡೆಸುತ್ತಿದ್ದ ವೇಳೆ ಲಭಿಸಿದ ಖಚಿತ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆದಿದ್ದು, ಈ ವೇಳೆ ಅಕ್ರಮ ಕೋಳಿ ಅಂಕದಲ್ಲಿ ತೊಡಗಿದ್ದವರನ್ನು ಪೊಲೀಸರು ವಶಕ್ಕೆ ಪಡೆದರು.
ಪೊಲೀಸ್ ತಂಡವನ್ನು ಕಂಡ ಕೆಲವರು ಸ್ಥಳದಿಂದ ಪರಾರಿಯಾಗಿದ್ದಾರೆ. ಬಂಧಿತರನ್ನು ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಹಾಯಕ ಉಪನಿರೀಕ್ಷಕ ಸನೀಶ್ ಸಿರಿಯಕ್ ಹಾಗೂ ಹಿರಿಯ ನಾಗರಿಕ ಪೊಲೀಸ್ ಅಧಿಕಾರಿಗಳಾದ ಗೋಕುಲ್, ಗಣೇಶ್ ಮತ್ತು ಮನೇಶ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

0 Comments