ಮಂಗಳೂರು : ದಸರಾ ರಜೆ ಸಮಯದಲ್ಲಿ ಪದವಿ ಸೆಮಿಸ್ಟರ್ ಪರೀಕ್ಷೆ ಆಯೋಜಿಸಿದ ಮಂಗಳೂರಿನ ಕಾಲೇಜಿನ ವಿರುದ್ದ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದಿದೆ. ಬೆಂದೂರ್ ವೆಲ್ ನಲ್ಲಿರುವ ಸಂತ ಆಗ್ನೆಸ್ ಕಾಲೇಜು ಆಡಳಿತದ ನಡೆಗೆ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿ ಕಾಲೇಜಿನೆದುರು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನಾನಿರತ ವಿದ್ಯಾರ್ಥಿ ಮುಖಂಡರನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಮುಂದಾದಾಗ ಸ್ಥಳದಲ್ಲಿದ್ದ ವಿದ್ಯಾರ್ಥಿನಿಯರು ಪೊಲೀಸ್ ಜೀಪ್ ಗೆ ಅಡ್ಡಗಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕೆಲ ಕಾಲ ಇದರಿಂದಾಗಿ ರಸ್ತೆ ತಡೆ ಉಂಟಾಯಿತು.
ಇಂದಿನಿಂದ ಅ.28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಯನ್ನು ಆಯೋಜಿಸಿದ್ದು ಜೆನ್ ಝೀ ತಲೆಮಾರಿನ ವಿದ್ಯಾರ್ಥಿಗಳ ಸಿಟ್ಟಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಮಾಡಿದ ಮನವಿಯನ್ನು ಕಾಲೇಜು ಆಡಳಿತ ಮಂಡಳಿ ಪುರಸ್ಕರಿಸದೇ ಇದ್ದುದು ಪರಿಸ್ಥಿತಿಯನ್ನು ಜಟಿಲಗೊಳಿಸಿದೆ. ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗೂ ಈ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಮಂಗಳೂರು ದಸರಾ ಸಂಭ್ರಮದ ಹೊತ್ತಲ್ಲಿ ಪರೀಕ್ಷೆ ಆಯೋಜನೆ ಮಾಡಿರುವುದು ಹಬ್ಬದ ಸಂಭ್ರಮಕ್ಕೆ ಅಡ್ಡಿ ತಂದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಎಬಿವಿಪಿ ವಿದ್ಯಾರ್ಥಿ ಸಂಘಟನೆಯಿಂದಲೂ ಪ್ರತಿಭಟನೆಗೆ ಬೆಂಬಲ ವ್ಯಕ್ತವಾಗಿದೆ. ಮನವಿ ಸಲ್ಲಿಸಿದರೂ ಪರೀಕ್ಷೆ ಮುಂದೂಡದೇ ಕಾಲೇಜು ಆಡಳಿತದ ಉದ್ದಟತನ ತೋರಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದ್ದಾರೆ.ಇತ್ತ ಕಾಲೇಜು ಕೂಡಾ ತನ್ನ ನಿಲುವಿಗೆ ಅಂಟಿ ಕೊಂಡಿರುವುದರಿಂದ ಪರಿಸ್ಥಿತಿ ಕಗ್ಗಂಟಾಗಿದೆ.
ದಸರಾ ಹಬ್ಬದ ಸಂದರ್ಭದಲ್ಲಿ ಪರೀಕ್ಷೆಗಳನ್ನು ನಡೆಸಿರುವುದನ್ನು ವಿಶ್ವ ಹಿಂದೂ ಪರಿಷತ್ ತೀವ್ರವಾಗಿ ಖಂಡಿಸಿದೆ. ಹಬ್ಬದ ರಜೆಯಲ್ಲಿ ಪರೀಕ್ಷೆ ಇಟ್ಟು ವಿದ್ಯಾರ್ಥಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವ ಕಾಲೇಜು ಆಡಳಿತ ಮಂಡಳಿಯ ಧೋರಣೆಯನ್ನು ವಿರೋಧಿಸಿ, ಎಬಿವಿಪಿ ನಡೆಸುತ್ತಿರುವ ಈ ನ್ಯಾಯಯುತ ಹೋರಾಟಕ್ಕೆ ವಿಶ್ವ ಹಿಂದೂ ಪರಿಷದ್ ನಾಯಕ ಶರಣ್ ಪಂಪುವೆಲ್ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಕೂಡಲೇ ಕಾಲೇಜು ಅಡಳಿತ ಮಂಡಳಿ ಪರೀಕ್ಷಾ ದಿನಾಂಕವನ್ನು ಬದಲಾಯಿಸಬೇಕೆಂದು ಆಗ್ರಹಿಸಲಾಗಿದೆ.
.jpeg)
.jpeg)
0 Comments