ಕೊಚ್ಚಿ: ರಾಜಸ್ಥಾನದ ನಿವೃತ್ತ ನ್ಯಾಯಾಧೀಶರೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ 2.5 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಎರ್ನಾಕುಳಂ ಜಿಲ್ಲೆಯ ವರಾಪುಳ ಮಣ್ಣಾಂತುರತ್ತ್ ಚಿಟ್ಟೇತ್ ನಿವಾಸಿ ಆನಂದ್ ಬಾಬು (32) ಬಂಧಿತ ಆರೋಪಿ. ರಾಜಸ್ಥಾನ ಪೊಲೀಸರು ಮತ್ತು ಕೊಚ್ಚಿ ನಗರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವರಾಪುಳದಿಂದ ಆತನನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಕೇರಳಕ್ಕೆ ಆಗಮಿಸಿದ್ದ ರಾಜಸ್ಥಾನ ಪೊಲೀಸರು ಕೊಚ್ಚಿ ನಗರ ಪೊಲೀಸರ ಸಹಾಯ ಕೋರಿದ್ದರು.
ಪುಲ್ವಾಮಾ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಹವಾಲಾ ವಹಿವಾಟಿನಲ್ಲಿ ಭಾಗಿಯಾಗಿರುವುದಾಗಿ ಆರೋಪಿಸಿ, ನಿವೃತ್ತ ನ್ಯಾಯಾಧೀಶರನ್ನು ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಬೆದರಿಸಿ ಆರೋಪಿಗಳು ಹಣ ವಂಚಿಸಿದ್ದರು ಎಂದು ತಿಳಿದುಬಂದಿದೆ.
ಎರ್ನಾಕುಳಂ ಸೆಂಟ್ರಲ್ ಎಸಿಪಿ ಸಿಬಿ ಟಾಮ್ ನೇತೃತ್ವದ ತನಿಖಾ ತಂಡವು ರಾಜಸ್ಥಾನ ಪೊಲೀಸರ ಸಹಕಾರದೊಂದಿಗೆ ವರಾಪುಳದಲ್ಲಿ ಶೋಧ ನಡೆಸಿ ಆರೋಪಿಯನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಕೇರಳದ ಇನ್ನೂ ಹಲವು ಮಂದಿ ಭಾಗಿಯಾಗಿರುವ ಶಂಕೆಯಿದೆ ಎಂದು ರಾಜಸ್ಥಾನ ಪೊಲೀಸರು ತಿಳಿಸಿದ್ದಾರೆ.
ಉಪನಿರೀಕ್ಷಕರಾದ ಅನೂಪ್ ಸಿ., ಹರೀಶ್, ಇ.ಎಂ. ಶಾಜಿ, ಸಹಾಯಕ ಉಪನಿರೀಕ್ಷಕ ಸುನಿಲ್ ಜಲೀಲ್ ಹಾಗೂ ಹಿರಿಯ ಸಿವಿಲ್ ಪೊಲೀಸ್ ಅಧಿಕಾರಿಗಳಾದ ಹರೀಶ್ ಬಾಬು, ವಿಬಿನ್ ಮತ್ತು ಶಿಜಿತ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

0 Comments