ಬೈಂದೂರು : ರಾಮಕ್ಷತ್ರಿಯ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯ ಉದ್ದೇಶದಿಂದ ಅಖಿಲ ಕರ್ನಾಟಕ ಕೋಟೆಗಾರ ಸಂಘದ ಪ್ರಾಯೋಜಕತ್ವದಲ್ಲಿ ಉಡುಪಿ ಜಿಲ್ಲಾ ರಾಮಕ್ಷತ್ರಿಯ ಒಕ್ಕೂಟವನ್ನು ಬೈಂದೂರಿನ ಯಡ್ತರೆಯ ಜೆಎನ್‌ಆರ್ ಕಲಾಮಂದಿರದಲ್ಲಿ ಸ್ಥಾಪಿಸಲಾಯಿತು.
ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್ ಒಕ್ಕೂಟವನ್ನು ಉದ್ಘಾಟಿಸಿ, ಕೋಟೆಗಾರ, ರಾಮಕ್ಷತ್ರಿಯ, ಹಿಂದೂ ಕ್ಷತ್ರಿಯ, ಶೇರುಗಾರ್ ಸೇರಿದಂತೆ ವಿವಿಧ ಹೆಸರುಗಳಿಂದ ಗುರುತಿಸಿಕೊಂಡಿರುವ ಸಮುದಾಯದವರು ಒಗ್ಗಟ್ಟಿನಿಂದ ಸಂಘಟಿತರಾಗಿ ಸರ್ಕಾರಿ ಮಾನ್ಯತೆ, ಮೀಸಲಾತಿ ಹಾಗೂ ಕಲ್ಯಾಣ ಸೌಲಭ್ಯಗಳಿಗಾಗಿ ಶ್ರಮಿಸಬೇಕು ಎಂದರು.
ಒಕ್ಕೂಟದ ಅಧ್ಯಕ್ಷ ಕೊತ್ವಾಲ್ ಪದ್ಮನಾಭ ಶೇರುಗಾರ್ ಗಂಗೊಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಉದ್ಯೋಗಾವಕಾಶ ಹಾಗೂ ಸಮುದಾಯದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದರು. ನಾಡೋಜ ಡಾ. ಕೂಡ್ಲು ಕೃಷ್ಣಪ್ರಸಾದ್ ಅವರು ಸಮುದಾಯದ ಒಗ್ಗಟ್ಟು, ಸರ್ಕಾರಿ ಮಾನ್ಯತೆ ಮತ್ತು ಕೋಟೆಗಾರ ನಿಗಮ ಸ್ಥಾಪನೆಯ ಅಗತ್ಯವನ್ನು ಪ್ರತಿಪಾದಿಸಿದರು.
ಡಾ. ರಾಜೇಂದ್ರ ಕೆ. ಸಮುದಾಯದ ಇತಿಹಾಸ ಮತ್ತು ಪರಂಪರೆಯ ಕುರಿತು ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸುರೇಶ್ ಬಟ್ವಾಡಿ, ಸದಾಶಿವ ಡಿ., ಗಣಪತಿ ಹೋಬಳಿದಾರ, ಮಂಜುನಾಥ್ ಎನ್., ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ಕಲಮಕ್ಕಿ, ಗಣಪತಿ ಶೇರೇಗಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜಬಾಂಧವರು ಉಪಸ್ಥಿತರಿದ್ದರು. ಕಾರ್ಯಾಧ್ಯಕ್ಷ ಶ್ರೀನಿವಾಸ್ ಶೇರೇಗಾರ್ ಹೆಬ್ರಿ ಸ್ವಾಗತಿಸಿ, ಡಾ. ಬಾಲಕೃಷ್ಣ ಎಸ್. ಮದ್ದೋಡಿ ವಂದಿಸಿದರು. ಬಳಿಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.

0 Comments