ಕಾಸರಗೋಡು : ವಿಜಯ ದಶಮಿಯ ಪವಿತ್ರ ದಿನದ ಅಂಗವಾಗಿ ಜಿಲ್ಲೆಯ ವಿವಿಧ ದೇವಾಲಯಗಳು, ಧಾರ್ಮಿಕ ಕ್ಷೇತ್ರಗಳು ಹಾಗೂ ತರವಾಡು ಮನೆಗಳಲ್ಲಿ ವಿದ್ಯಾರಂಭ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು.
ನವರಾತ್ರಿ ಉತ್ಸವದ ಸಮಾರೋಪದೊಂದಿಗೆ ಆಚರಿಸಲ್ಪಡುವ ವಿಜಯ ದಶಮಿಯಂದು ಪುಟಾಣಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ವಿದ್ಯಾರಂಭಕ್ಕೆ ಚಾಲನೆ ನೀಡಲಾಯಿತು. ಪೋಷಕರು ತಮ್ಮ ಮಕ್ಕಳನ್ನು ದೇವಾಲಯಗಳಿಗೆ ಕರೆತಂದು ಅರ್ಚಕರ ಮಾರ್ಗದರ್ಶನದಲ್ಲಿ ಅಕ್ಕಿ, ಅಕ್ಕಿಹಿಟ್ಟು ಹಾಗೂ ಫಲಕಗಳ ಮೇಲೆ ಅಕ್ಷರಗಳನ್ನು ಬರೆಸುವ ಮೂಲಕ ವಿದ್ಯಾಭ್ಯಾಸದ ಮೊದಲ ಹೆಜ್ಜೆ ಇರಿಸಿದರು.
ಮಕ್ಕಳು ಮೊದಲ ಬಾರಿಗೆ ಅಕ್ಷರಗಳನ್ನು ಬರೆಯುವ ಈ ಸಂಪ್ರದಾಯವು ಜ್ಞಾನಾರ್ಜನೆ, ಉತ್ತಮ ಭವಿಷ್ಯ ಹಾಗೂ ಶೈಕ್ಷಣಿಕ ಪ್ರಗತಿಯ ಸಂಕೇತವಾಗಿ ಪರಿಗಣಿಸಲ್ಪಡುತ್ತದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ವಿದ್ಯಾರಂಭ ಕಾರ್ಯಕ್ರಮಗಳು ನಡೆದಿದ್ದು, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುವ ಹಾಗೂ ಶಿಕ್ಷಣದ ಮಹತ್ವವನ್ನು ಸಾರುವ ಸಂದೇಶವನ್ನು ವಿಜಯ ದಶಮಿ ಹಬ್ಬ ಸಾರಿತು.ವಿದ್ಯೆಯ ಅಧಿದೇವತೆ ಸರಸ್ವತಿ ದೇವಿಯ ಕೃಪೆಯಿಂದ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂಬ ಆಶಯದೊಂದಿಗೆ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಹೊಸ ಪಯಣಕ್ಕೆ ಶುಭಾರಂಭ ಮಾಡಿದರು.
ಕಾಸರಗೋಡು ಪಿಲಿಕುಂಜೆ ಶ್ರೀ ಜಗದಾಂಬ ದೇವಿ ಕ್ಷೇತ್ರದಲ್ಲಿ ಗೋಪಾಲಕೃಷ್ಣ ಭಟ್ ಅವರ ನೇತೃತ್ವದಲ್ಲಿ ವಿದ್ಯಾರಂಭ ಕಾರ್ಯಕ್ರಮ ನಡೆಯಿತು. ಜಿಲ್ಲೆಯ ಮಲ್ಲ, ಕೊರಕ್ಕೋಡು, ಇಡಿಯಡ್ಕ ಸಹಿತ ವಿವಿಧ ಕ್ಷೇತ್ರದಲ್ಲಿ ವಿದ್ಯಾರಂಭ ನಡೆಯಿತು. ವಿವಿಧ ಶಾಲೆಗಳಲ್ಲೂ ವಿಜಯ ದಶಮಿ ಪೂಜೆ ನಡೆಯಿತು.


0 Comments