ಬಂಟ್ವಾಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಗೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಆರೋಪದ ಮೇಲೆ ಪತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತಪಟ್ಟವರನ್ನು ಬೆಳಗಾವಿ ಜಿಲ್ಲೆಯ ಅಥಣಿ ನಿವಾಸಿ ಸುನೀತಾ ಮಹಾದೇವ್ ದೇಸಂಗಿ (34) ಹಾಗೂ ಆರೋಪಿಯನ್ನು ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಸಂಜೀವಕುಮಾರ್ (36) ಎಂದು ಗುರುತಿಸಲಾಗಿದೆ.
ಸುನೀತಾ ಅವರನ್ನು ಸಂಜೀವಕುಮಾರ್‌ಗೆ ವಿವಾಹ ಮಾಡಿಕೊಡಲಾಗಿತ್ತು. ದಂಪತಿ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ವಾಸಿಸುತ್ತಿದ್ದರು. ದಂಪತಿ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ರಾಜಿ ಸಂಧಾನ ನಡೆಸಿದ್ದರು ಎನ್ನಲಾಗಿದೆ.
ಹೆರಿಗೆಯಾದ ಬಳಿಕ ಸುನೀತಾ ತವರು ಮನೆಯಲ್ಲಿದ್ದರು. ಅಕ್ಟೋಬರ್ 4ರಂದು ಆರೋಪಿ ಅವರನ್ನು ಬಂಟ್ವಾಳದ ಮನೆಗೆ ಕರೆತಂದಿದ್ದನು. ಅಕ್ಟೋಬರ್ 22ರಂದು ಸುನೀತಾ ತನ್ನ ಸಹೋದರ ಅರುಣ್ ಮಹಾದೇವ್ ದೇಸಂಗಿ ಅವರಿಗೆ ಕರೆ ಮಾಡಿ, ಪತಿ ಕಿರುಕುಳ ನೀಡುತ್ತಿದ್ದು, ಹಲ್ಲೆ ನಡೆಸುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ.
ಅಕ್ಟೋಬರ್ 23ರ ಮುಂಜಾನೆ ಸಂಜೀವಕುಮಾರ್ ಕರೆ ಮಾಡಿ, ಸುನೀತಾ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸುತ್ತಿರುವುದಾಗಿ ತಿಳಿಸಿದ್ದನು. ಬಳಿಕ ಸ್ಥಳಕ್ಕೆ ಬಂದ ಸಹೋದರ ನೋಡಿದಾಗ ಸುನೀತಾ ಮೃತಪಟ್ಟಿದ್ದರು. ಮೃತದೇಹವನ್ನು ಪರಿಶೀಲಿಸಿದಾಗ ಹಲ್ಲೆಯ ಗಾಯಗಳು ಹಾಗೂ ರಕ್ತ ಕಂಡುಬಂದಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 22ರ ರಾತ್ರಿ ಮತ್ತು ಅಕ್ಟೋಬರ್ 23ರ ಮುಂಜಾನೆಯ ನಡುವಿನ ಅವಧಿಯಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸಂಜೀವಕುಮಾರ್ ಮಾರಣಾಂತಿಕ ಹಲ್ಲೆ ನಡೆಸಿ ಸುನೀತಾ ಅವರನ್ನು ಕೊಲೆ ಮಾಡಿದ್ದಾನೆ ಎಂದು ಅರುಣ್ ದೂರು ನೀಡಿದ್ದಾರೆ.
ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 103ರ ಅಡಿಯಲ್ಲಿ ತನಿಖೆ ನಡೆಯುತ್ತಿದೆ. ಆರೋಪಿ ಸಂಜೀವಕುಮಾರ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

0 Comments