Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಬೆಂಗಳೂರಿನಲ್ಲಿ ಜಿಮ್ ಟ್ರೈನರ್ ಸಾವು: ಮೂವರು ಸಹೋದ್ಯೋಗಿಗಳ ವಿರುದ್ಧ ಪ್ರಕರಣ

ಬೆಂಗಳೂರು : ಜಿಮ್‌ನ ವಾರ್ಷಿಕೋತ್ಸವ ಕಾರ್ಯಕ್ರಮದ ಬಳಿಕ ನಡೆದ ಪಾರ್ಟಿಯಲ್ಲಿ ಗಲಾಟೆ ಉಂಟಾಗಿ ಜಿಮ್ ಟ್ರೈನರ್‌ ಒಬ್ಬರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ಹೆಬ್ಬಾಳದ ಕೆಂಪಾಪುರದಲ್ಲಿ ನಡೆದಿದೆ. ಮೃತರನ್ನು ನಂದನ್ (25) ಎಂದು ಗುರುತಿಸಲಾಗಿದೆ.

ಸಹಕಾರ ನಗರದ ‘ಮ್ಯಾಸಿವ್ ಜಿಮ್’ನಲ್ಲಿ ನಂದನ್ ಜಿಮ್ ಹಾಗೂ ಪರ್ಸನಲ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಶನಿವಾರ ಜಿಮ್‌ನ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿದ ಬಳಿಕ ಸ್ನೇಹಿತರು ಹಾಗೂ ಸಹೋದ್ಯೋಗಿಗಳೊಂದಿಗೆ ನಂದನ್ ತೆರಳಿದ್ದರು.

ನಂದನ್ ಪರ್ಸನಲ್ ಟ್ರೈನರ್ ಆಗಿ ತರಬೇತಿ ನೀಡುತ್ತಿದ್ದ ಅನುಶ್ ಎಂಬಾತ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ನಂದನ್, ವಿಶ್ವ, ಶರತ್ ಹಾಗೂ ನಿಶಾಂತ್ ತೆರಳಿ ಪಾರ್ಟಿ ಮಾಡಿದ್ದರು. ಈ ವೇಳೆ ವೈಯಕ್ತಿಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ನಂದನ್ ಹಾಗೂ ಇತರರ ನಡುವೆ ಗಲಾಟೆ ನಡೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ ಎನ್ನಲಾಗಿದೆ.

ಗಲಾಟೆಯ ವೇಳೆ ನಂದನ್ ಮೇಲೆ ಹಲ್ಲೆ ನಡೆಸಲಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರನ್ನು ಹೆಬ್ಬಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಂದನ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ನಂದನ್ ಅವರ ಸಹೋದ್ಯೋಗಿಗಳಾದ ವಿಶ್ವ, ಶರತ್ ಹಾಗೂ ನಿಶಾಂತ್ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ಕುರಿತು ಈಶಾನ್ಯ ವಿಭಾಗದ ಡಿಸಿಪಿ ಜಿ.ಕೆ. ಮಿಥುನ್ ಕುಮಾರ್ ಮಾಹಿತಿ ನೀಡಿದ್ದು, ನಂದನ್ ಹಾಗೂ ಆರೋಪಿಗಳು ಒಂದೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದರು. ವೈಯಕ್ತಿಕ ಕಾರಣದಿಂದ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

Post a Comment

0 Comments

ಜಾಹೀರಾತು

Responsive Advertisement