ಬೆಳ್ಳೂರು: ಮಕ್ಕಳು ಕೇಳಿದ್ದನ್ನೆಲ್ಲ ಕೊಡುತ್ತಾ, ಅವರ ಪ್ರತಿಯೊಂದು ಆಸೆಗೂ ಅಸ್ತು ಎನ್ನುವ ಅಸ್ತು ಸಂಸ್ಕೃತಿಯಿಂದ ನಾವು ಅಧಃಪತನದತ್ತ ಸಾಗುವ ಅಪಾಯವಿದೆ. ಅದರ ಬದಲಾಗಿ ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಜೀವನ ಮೌಲ್ಯಗಳನ್ನು ಅರಿತು, ಶಿಸ್ತುಬದ್ಧವಾಗಿ ಬದುಕುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಮಾತಾನಂದಮಯೀ ಕರೆ ನೀಡಿದರು.
ಬೆಳ್ಳೂರಿನ ಶ್ರೀಮಹಾವಿಷ್ಣು ಸಭಾಂಗಣದಲ್ಲಿ ನಡೆದ ಬಂಟ ಮಹಿಳೆಯರ ಕೂಟದ ‘ಬೊಳ್ಳಿಪರ್ಬ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಮಕ್ಕಳಿಗೆ ಕೇವಲ ಭೌತಿಕ ಸೌಲಭ್ಯಗಳನ್ನು ಒದಗಿಸುವುದಷ್ಟೇ ಪೋಷಕರ ಕರ್ತವ್ಯವಲ್ಲ. ಅವರಲ್ಲಿ ಉತ್ತಮ ಸಂಸ್ಕಾರ, ಹಿರಿಯರ ಬಗ್ಗೆ ಗೌರವ, ಸಮಾಜದ ಬಗ್ಗೆ ಕಾಳಜಿ ಹಾಗೂ ಜೀವನದಲ್ಲಿ ಶಿಸ್ತನ್ನು ಬೆಳೆಸುವುದು ಅತ್ಯಂತ ಮುಖ್ಯವಾಗಿದೆ ಎಂದು ಅಭಿಪ್ರಾಯಪಟ್ಟರು. ಬಂಟ ಮಹಿಳಾ ಸಂಘದ ಅಧ್ಯಕ್ಷೆ ಡಾ. ವಿದ್ಯಾಮೋಹನ್‌ದಾಸ್ ರೈ ಅಧ್ಯಕ್ಷತೆವಹಿಸಿದ್ದರು.
ಕಾರ್ಯಕ್ರಮದಲ್ಲಿ ಡಾ. ನಯನ ಪಕ್ಕಳ, ವಿನೀತಾ ರೈ, ಬಂಟ ಮಹಿಳಾ ಸಂಘದ ಚೆಂಗಳ ಘಟಕದ ಅಧ್ಯಕ್ಷೆ ಲತಾ ಬಿ. ರೈ ನಾರಂಪಾಡಿ, ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷೆ ಶ್ಯಾಮಲ ಎಂ.ಶೆಟ್ಟಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಕಾರ್ಯದರ್ಶಿ ಶ್ರೀಲತಾ ಎಸ್. ರೈ ಪಂಬುಡೆ ವರದಿ ಮಂಡಿಸಿದರು. ಬಂಟ ಮಹಿಳೆಯರ ಕೂಟದ ಉಪಾಧ್ಯಕ್ಷೆಯರಾದ ಮಾಲತಿ ಜೆ. ರೈ ಸ್ವಾಗತಿಸಿ, ಶ್ಯಾಮಲ ಎಸ್ ರೈ ವಂದಿಸಿದರು.

0 Comments