Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಆನ್‌ಲೈನ್ ವಂಚನೆ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು: 3.73 ಲಕ್ಷ ರೂ. ಮರುಪಾವತಿಗೆ ಎಸ್‌ಬಿಐಗೆ ಆದೇಶ

ಕೊಚ್ಚಿ : ಆನ್‌ಲೈನ್ ಬ್ಯಾಂಕಿಂಗ್ ವಂಚನೆಯಿಂದ ಕಳೆದುಕೊಂಡಿದ್ದ 3.73 ಲಕ್ಷ ರೂ.ಗಳನ್ನು ಸಂತ್ರಸ್ತೆಗೆ ಹಿಂದಿರುಗಿಸುವಂತೆ ಕೇರಳ ಹೈಕೋರ್ಟ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)ಗೆ ಆದೇಶಿಸಿದೆ. ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಪಳಶ್ಶಿರಾಜ ಎನ್‌ಎಸ್‌ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಟಿ.ಎಲ್. ರಮಾದೇವಿ ಅವರಿಗೆ ನಾಲ್ಕು ವಾರಗಳೊಳಗೆ 3,73,000 ರೂ. ಪಾವತಿಸುವಂತೆ ನ್ಯಾಯಮೂರ್ತಿ ಹರಿಶಂಕರ್ ವಿ. ಮೆನನ್ ಸೂಚಿಸಿದ್ದಾರೆ.

ಈ ಪ್ರಕರಣದಲ್ಲಿ ದೂರುದಾರರ ಅರ್ಜಿಯನ್ನು ತಿರಸ್ಕರಿಸಿದ್ದ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ನ ಆದೇಶವನ್ನೂ ನ್ಯಾಯಾಲಯ ರದ್ದುಗೊಳಿಸಿದೆ. 2019ರ ಜುಲೈ 13ರಂದು ರಮಾದೇವಿ ಅವರಿಗೆ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ನಕಲಿ ಸಂದೇಶ ಹಾಗೂ ದೂರವಾಣಿ ಕರೆ ಬಂದಿತ್ತು. ಎಟಿಎಂ ಕಾರ್ಡ್ ಬ್ಲಾಕ್ ಆಗಲಿದ್ದು, ಅದನ್ನು ಮತ್ತೆ ಸಕ್ರಿಯಗೊಳಿಸಲು ‘ಸ್ಟೇಟ್ ಬ್ಯಾಂಕ್ ಸೆಕ್ಯೂರ್ ಆ್ಯಪ್’ ಇನ್‌ಸ್ಟಾಲ್ ಮಾಡಬೇಕೆಂದು ವಂಚಕ ನಂಬಿಸಿದ್ದ. ಬಳಿಕ ಒಟಿಪಿ ಪಡೆದುಕೊಂಡಿದ್ದಾನೆ. ಮತ್ತೊಂದು ಒಟಿಪಿ ನೀಡಿದರೆ ಮಾತ್ರ ಹಣ ಹಿಂಪಡೆಯಲು ಸಾಧ್ಯ ಎಂಬ ನಂಬಿಕೆಯಿಂದ ಅವರು ಒಟಿಪಿ ಹಂಚಿಕೊಂಡಿದ್ದರು. ಇದಾದ ಬಳಿಕ ಅವರ ಖಾತೆಯಿಂದ 3,73,000 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಲಾಗಿತ್ತು.

ವಂಚನೆ ನಡೆದ ತಕ್ಷಣವೇ ರಮಾದೇವಿ ಅವರು ಬ್ಯಾಂಕಿನ ಗ್ರಾಹಕ ಸೇವಾ ವಿಭಾಗ, ಮಟ್ಟನ್ನೂರು ಶಾಖೆ ಹಾಗೂ ಪೊಲೀಸರಿಗೆ ದೂರು ನೀಡಿದ್ದರು. ಜೊತೆಗೆ ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆಯನ್ನೂ ಸ್ಥಗಿತಗೊಳಿಸಿದ್ದರು. ಮಟ್ಟನ್ನೂರು ಪೊಲೀಸರು ನಡೆಸಿದ ತನಿಖೆಯಲ್ಲಿ ಪಶ್ಚಿಮ ಬಂಗಾಳದ ಸಂದೀಪ್ ಬೌರಿ ಎಂಬಾತ ಸ್ಪೈಸ್ ಡಿಜಿಟಲ್ ವ್ಯಾಲೆಟ್‌ಗಳನ್ನು ಬಳಸಿಕೊಂಡು ವಂಚನೆ ನಡೆಸಿರುವುದು ಪತ್ತೆಯಾಗಿತ್ತು.

ಆದರೂ ಕಳೆದುಕೊಂಡ ಹಣ ವಾಪಸ್ ಸಿಗದ ಹಿನ್ನೆಲೆಯಲ್ಲಿ ರಮಾದೇವಿ ಬ್ಯಾಂಕಿಂಗ್ ಒಂಬುಡ್ಸ್‌ಮನ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಆ ಅರ್ಜಿಯೂ ತಿರಸ್ಕೃತಗೊಂಡಿತ್ತು. ಬಳಿಕ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಖಾತೆದಾರರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ವಂಚಕರಿಗೆ ಸ್ವಯಂಪ್ರೇರಿತವಾಗಿ ಒಪ್ಪಿಸುವುದಿಲ್ಲ ಎಂಬ ಅಂಶವನ್ನು ಗುವಾಹಟಿ ಹೈಕೋರ್ಟ್‌ನ ಹಿಂದಿನ ತೀರ್ಪನ್ನು ಉಲ್ಲೇಖಿಸಿ ನ್ಯಾಯಾಲಯ ಗಮನಿಸಿದೆ. ಆನ್‌ಲೈನ್ ವಂಚನೆ ನಡೆದ ಮೂರು ಕೆಲಸದ ದಿನಗಳೊಳಗೆ ಬ್ಯಾಂಕ್‌ಗೆ ಮಾಹಿತಿ ನೀಡಿದರೆ, ಭಾರತೀಯ ರಿಸರ್ವ್ ಬ್ಯಾಂಕ್‌ನ ಸುತ್ತೋಲೆಯ ಪ್ರಕಾರ ಖಾತೆದಾರರಿಗೆ ಪರಿಹಾರ ಪಡೆಯುವ ಅವಕಾಶವಿದೆ ಎಂದೂ ನ್ಯಾಯಾಲಯ ತಿಳಿಸಿದೆ.

ವಂಚನೆ ನಡೆದ ಕೂಡಲೇ ಮಾಹಿತಿ ನೀಡಿದ್ದರೂ ಕಳೆದುಹೋದ ಹಣವನ್ನು ತಡೆಯಲು ಅಥವಾ ಮರುಪಾವತಿಸಲು ಬ್ಯಾಂಕ್ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಪರಿಗಣಿಸಿದ ಹೈಕೋರ್ಟ್, ನಾಲ್ಕು ವಾರಗಳೊಳಗೆ ರಮಾದೇವಿ ಅವರಿಗೆ ಸಂಪೂರ್ಣ 3.73 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಆದೇಶಿಸಿದೆ.

Post a Comment

0 Comments

ಜಾಹೀರಾತು

Responsive Advertisement