ಉಡುಪಿ : ಉಡುಪಿ ಜಿಲ್ಲೆಯಲ್ಲಿ ಹೊಸದಾಗಿ ರಚಿಸಲು ಉದ್ದೇಶಿಸಿರುವ ಜಿಲ್ಲಾ ಒಕ್ಕೂಟಕ್ಕೆ ‘ರಾಮಕ್ಷತ್ರಿಯ ಸಂಘಗಳ ಜಿಲ್ಲಾ ಒಕ್ಕೂಟ’ ಎಂದು ಹೆಸರಿಡಬೇಕು ಎಂದು ವಿಶ್ವರಾಮ ಕ್ಷತ್ರಿಯ ಮಹಾಸಂಘದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆಯ ಅಧ್ಯಕ್ಷತೆಯನ್ನು ಮಹಾಸಂಘದ ಅಧ್ಯಕ್ಷ ಎಚ್.ಆರ್. ಶಶಿಧರ ನಾಯಕ್ ವಹಿಸಿದ್ದರು. ಸಭೆಯಲ್ಲಿ ಉಡುಪಿ ಜಿಲ್ಲೆಯ ವಿವಿಧ ರಾಮಕ್ಷತ್ರಿಯ ಸಂಘಗಳ ಅಧ್ಯಕ್ಷರು, ಪ್ರತಿನಿಧಿಗಳು, ಮಹಾಸಂಘದ ಪದಾಧಿಕಾರಿಗಳು ಹಾಗೂ ಸಮಾಜ ಬಾಂಧವರು ಭಾಗವಹಿಸಿದ್ದರು.
ರಾಮಕ್ಷತ್ರಿಯ ಸಂಘ, ಉಡುಪಿ ಅಧ್ಯಕ್ಷ ಪ್ರವೀಣ್ ಕುಮಾರ್, ಕಾರ್ಕಳದ ಗುರುಪ್ರಸಾದ್, ಹೆಬ್ರಿಯ ಶ್ರೀನಿವಾಸ ಹೆಬ್ರಿ, ಬೈಂದೂರಿನ ಗುರುದತ್, ಗಂಗೊಳ್ಳಿ ಸಂಘದ ಪ್ರತಿನಿಧಿ ವಾಸುದೇವ ಸೇರುಗಾರ, ಕೋಡಿ ಸಂಘದ ಅಧ್ಯಕ್ಷ ಶರತ್ ಕಾವೇರಿ, ಕಾಪು ಸಂಘದ ಪ್ರತಿನಿಧಿ ಲಕ್ಷ್ಮೀನಾರಾಯಣ, ಸಾಸ್ತಾನ ಸಂಘದ ಅಧ್ಯಕ್ಷ ಶ್ರೀಧರ ಪಿ.ಎಸ್. ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಉಡುಪಿ ಜಿಲ್ಲೆಯಲ್ಲಿ ಹೊಸ ಜಿಲ್ಲಾ ಒಕ್ಕೂಟ ರಚಿಸುವ ಕುರಿತು ಸುದೀರ್ಘ ಚರ್ಚೆ ನಡೆದಿದ್ದು, ಸಂಘಟನೆಗಳ ಹೆಸರನ್ನು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ‘ರಾಮಕ್ಷತ್ರಿಯ’ ಎಂದೇ ನಮೂದಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಸಂಘಗಳ ಹೆಸರಿನೊಂದಿಗೆ ‘ಕೋಟೆಗಾರ್’, ‘ಶೇರುಗಾರ್’, ‘ಕೋಟೆಯಾರ್’ ಅಥವಾ ಇತರೆ ಯಾವುದೇ ನಾಮಪದಗಳನ್ನು ಸೇರಿಸಬಾರದು ಎಂಬ ನಿಲುವನ್ನು ಸಭೆ ವ್ಯಕ್ತಪಡಿಸಿತು.
ಹೊಸದಾಗಿ ಉದ್ಘಾಟನೆಗೊಳ್ಳಲಿರುವ ‘ಕೋಟೆಗಾರ್ ರಾಮಕ್ಷತ್ರಿಯ ಜಿಲ್ಲಾ ಒಕ್ಕೂಟ’ ಎಂಬ ಹೆಸರಿನ ಬದಲಾಗಿ ‘ರಾಮಕ್ಷತ್ರಿಯ ಸಂಘಗಳ ಜಿಲ್ಲಾ ಒಕ್ಕೂಟ’ ಎಂದು ಹೆಸರಿಸಬೇಕು ಎಂಬ ನಿರ್ಣಯವನ್ನು ಬಹುಮತದ ಆಧಾರದ ಮೇಲೆ ಕೈಗೊಳ್ಳಲಾಯಿತು.
ಸಭೆಯಲ್ಲಿ ಸುರೇಶ್ ಬಟವಾಡಿ, ರವೀಂದ್ರಜಿ ಗಂಗೊಳ್ಳಿ, ರಾಜೇಂದ್ರ ಕೆ. ಹಾಗೂ ಮಂಜುನಾಥ್ ಎನ್. ಕೇಶವ ನಾಯಕ್ ಅವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಮಹಾಸಂಘದ ಉಪಾಧ್ಯಕ್ಷ ಕೆ. ನಾಗರಾಜ್ ಕಾಮಧೇನು ಅವರು ವಿಷಯದ ಸಾಧಕ-ಬಾಧಕಗಳ ಕುರಿತು ವಿವರಿಸಿದರು.
ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಕ್ರೋಡೀಕರಿಸಿ, ಸಂಘದ ಅಧ್ಯಕ್ಷರ ನಿಲುವನ್ನೂ ಪರಿಗಣಿಸಿದ ಬಳಿಕ ಬಹುಮತದ ಆಧಾರದ ಮೇಲೆ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆಡಳಿತ ಮಂಡಳಿಯ ಒಪ್ಪಿಗೆಯ ಮೇರೆಗೆ ರಾಮಕ್ಷತ್ರಿಯ ಸಮಾಜದ ಸಮಸ್ತ ಬಾಂಧವರ ಮಾಹಿತಿಗಾಗಿ ಈ ನಿರ್ಣಯವನ್ನು ಪ್ರಕಟಿಸಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಶ್ರೀಧರ ಪಿ.ಎಸ್. ತಿಳಿಸಿದ್ದಾರೆ.

0 Comments