ಪೆರ್ಲ : ಮಂಗಳೂರಿನ ಪ್ರತಿಷ್ಠಿತ ಆಕ್ಸಿಸ್ ಮಾಕ್ಸ್ ಲೈಫ್ ಇನ್ಸೂರೆನ್ಸ್ ನೀಡುವ ಗೌರವ ಪ್ರಶಸ್ತಿಗೆ ಪೆರ್ಲ ಚತುರ ಸಂಘಟಕ,ಯುವ ಕವಿ,ಕೃಷಿಕ ಸುಭಾಷ್ ಪೆರ್ಲ ಆಯ್ಕೆಯಾಗಿದ್ದಾರೆ. ಮೇ 23ರಂದು ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ. ಕೃಷಿಕರಾಗಿ ಗುರುತಿಸಿಕೊಂಡಿದ್ದ ಸುಭಾಷ್ ಪೆರ್ಲ ತುಳು,ಕನ್ನಡ,ಮರಾಟಿ ಭಾಷೆಯಲ್ಲಿ ಕವನಗಳನ್ನು ಬರೆಯುವಲ್ಲಿ ಸಮರ್ಥರು. ಸವಿ ಹೃದಯದ ಕವಿ ಮಿತ್ರರು ಎಂಬ ಸಂಘಟನೆಯನ್ನು ಹುಟ್ಟು ಹಾಕಿದ ಇವರು ನಾಡಿನ ಎಲೆಮರೆಯ ಸಾಧಕರನ್ನು,ಉದಯೋನ್ಮುಖ ಕವಿಗಳಿಗು ವೇದಿಕೆಯೊದಗಿಸಿ ಸ್ಪೂರ್ತಿಗೆ ಕಾರಣರಾಗಿದ್ದಾರೆ. ತಿಂಗಳಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಸಂಯೋಜಿಸುವ ಇವರು ಕಾಸರಗೋಡಿನ ವಿವಿದೆಡೆಗಳಲ್ಲಿ ಮಾತ್ರವಲ್ಲದೆ ದೂರದ ದಿಲ್ಲಿ,ಮೈಸೂರು,ಕೊಚ್ಚಿ, ಕಣ್ಣೂರು ಸಹಿತ ವಿವಿದೆಡೆಗಳಲ್ಲಿ ಸಾಹಿತ್ಯಾಸ್ವದಕರನ್ನು ಸಂಘಟಿಸಿಕೊಂಡು ಕಾರ್ಯಕ್ರಮಗಳನ್ನು ರೂಫಿಸುವ ರೂವಾರಿಯಾಗಿದ್ದಾರೆ. ಚಿಕ್ಕಂದಿನಿಂದಲೇ ಪರಿಶ್ರಮ ನಿರತರಾಗಿ ಕೃಷಿ ಕೈಂಕರ್ಯದಲ್ಲಿ ತೊಡಗಿಸಿಕೊಂಡಿರುವ ಇವರು ಆಕಾಶ್ ವಾಚ್ ವರ್ಕ್ಸ್ ಹಾಗೂ ಅಭಿ ಬೋರ್ ವೆಲ್ಸ್ ಸಂಸ್ಥೆಯ ಮಾಲೀಕರಾಗಿದ್ದಾರೆ. ಪೆರ್ಲ ಸಮೀಪದ ಬೆದ್ರಂಪಳ್ಳದಲ್ಲಿ ಪರಿಶ್ರಮ ಗಾರ್ಡನ್ ಎಂಬ ಸುಂದರ ಸರಳ ಶೈಲಿಯ ಕವಿ ಮನೆ ನಿರ್ಮಿಸಿ ನೂರಾರು ನೋಟಕರನ್ನು ತನ್ನೆಡೆಗೆ ಸೆಳೆದಿರುವುದು ಮಾತ್ರವಲ್ಲದೆ ಇಲ್ಲಿ ಹಲವು ಕಾರ್ಯಕ್ರಮಗಳನ್ನು ಸಮಾನಸಕ್ತರ ಜತೆಗೂಡಿ ಆಯೋಜಿಸಿ ಗಮನಾರ್ಹರಾಗಿದ್ದಾರೆ. ಇತ್ತೀಚಿಗೆ ಕಣ್ಣೂರಿನ ನವಪುರಂ ಎಂಬಲ್ಲಿನ ಮತಾತೀತ ಪುಸ್ತಕ ದೇವಾಲಯದಲ್ಲಿ ಕಾಸರಗೋಡು ಹಾಗೂ ದ.ಕ.ಜಿಲ್ಲೆಯ ಕವಿಗಳನ್ನು ಸಂಘಟಿಸಿ ನವಪುರಂ ನವರಸ ಎಂಬ ಕಾರ್ಯಕ್ರಮವನ್ನು ವೈಶಿಷ್ಠಪೂರ್ಣವಾಗಿ ಆಯೋಜಿಸಿದ್ದರು. ಇದೀಗ ಇವರ ನೇತೃತ್ಚದಲ್ಲಿ ಮೇ 25ಕ್ಕೆ ಶೃಂಗೇರಿ ಸಾಹಿತ್ಯ ದರ್ಶನ ಎಂಬ ವಿಹಾರ ಯಾತ್ರೆಯ ವೈವಿಧ್ಯಮಯ ಕಾರ್ಯಕ್ರಮ ಸಂಘಟಿಸಲ್ಪಡುತ್ತಿದೆ. ಈ ನಡುವೆ ಇವರ ಸಂಘಟನಾ ಚತುರತೆಯನ್ನು ಗಮನಿಸಿಕೊಂಡು ನೀಡಲ್ಪಡುವ ಆಕ್ಸಿಸ್ ಮಾಕ್ಸ್ ಲೈಫ್ ಗೌರವ ಪ್ರಶಸ್ತಿ ಇವರ ಕ್ರಿಯಾಶೀಲ ಚಟುವಟಿಕೆಗೊಂದು ಸ್ಪೂರ್ತಿಯಾಗಿದೆ.
0 Comments