ಉಪ್ಪಿನಂಗಡಿ: ಕಡಬ ತಾಲೂಕಿನ ಗುಂಡ್ಯ ಚೆಕ್‌ಪೋಸ್ಟ್ ಬಳಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ಕಳವು ಮಾಡಿದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕಳವಾಗಿದ್ದ ಆಂಬ್ಯುಲೆನ್ಸ್ ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳ ನಿವಾಸಿ ಶೋದನ್(22)ಬಂಧಿತ ಆರೋಪಿ. ಶಿರಾಡಿ ನಿವಾಸಿ ಸುರೇಶ್ ಅವರು ತನ್ನ ಆಂಬ್ಯುಲೆನ್ಸನ್ನು ಪ್ರತಿ ದಿನ ರಾತ್ರಿ ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿ ಲಾಕ್ ಮಾಡಿ ಮನೆಗೆ ಹೋಗುತ್ತಿದ್ದರು. ಅದರಂತೆ ಡಿ.19ರಂದು ರಾತ್ರಿ ಎಂದಿನಂತೆ ಗುಂಡ್ಯ ಚೆಕ್ ಪೋಸ್ಟ್ ಬಳಿ ನಿಲ್ಲಿಸಿದ್ದರು. ರಾತ್ರಿ ಅಪಘಾತದ ಬಗ್ಗೆ ತುರ್ತು ಕರೆ ಬಂದಾಗ ಬದಲಿ ಚಾಲಕರ ಅನುಕೂಲತೆಗಾಗಿ ಆಂಬ್ಯುಲೆನ್ಸ್ ಕೀಯನ್ನು ಆಂಬ್ಯುಲೆನ್ಸ್ ನಲ್ಲಿ ಇಟ್ಟು ಹೋಗಿದ್ದರು. ಮರುದಿನ ಡಿ.20ರಂದು ಬೆಳಿಗ್ಗೆ ಮನೆಯಿಂದ ಆಂಬ್ಯುಲೆನ್ಸ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಆಂಬ್ಯುಲೆನ್ಸ್ ಕಳವಾಗಿತ್ತು. ಈ ಬಗ್ಗೆ ಸುರೇಶ್ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದರಂತೆ ಡಿ.20ರಂದು ಹಾಸನ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಆರೋಪಿ ಶೋದನ್‌ನನ್ನು ಹಾಸನದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಈ ವೇಳೆ ತಪ್ಪೊಪ್ಪಿಕೊಂಡ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

0 Comments