ಢಾಕಾ: ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಶರೀಫ್ ಉಸ್ಮಾನ್ ಹಾದಿ ಹತ್ಯೆ ಬಳಿಕ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಭಾರತೀಯ ಅಲ್ಪ ಸಂಖ್ಯಾತರ ಮೇಲೆ ಹಿಂಸಾಚಾರ ಮುಂದುವರಿದಿದೆ. ಭಾರತ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಬಾಂಗ್ಲಾ ನಾಯಕರು ಅಲ್ಲಿನ ಜನರನ್ನ ರೊಚ್ಚಿಗೆಬ್ಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಭಾರತ ಸರ್ಕಾರವು ಚಿತ್ತಗಾಂಗ್ ನಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಭಾರತೀಯ ವೀಸಾ ಅರ್ಜಿ ಕೇಂದ್ರದಲ್ಲಿ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸಲಾಗಿದೆ.
ಕಳೆದ ವರ್ಷ ವಿದ್ಯಾರ್ಥಿ ನೇತೃತ್ವದ ಪ್ರತಿಭಟನೆಗಳಲ್ಲಿ ಪ್ರಮುಖ ಪಾತ್ರ ವಹಿಸಿ ಅಂದಿನ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಮೂಲಕ ದೇಶವನ್ನೇ ತೊರೆಯುವಂತೆ ಮಾಡುವಲ್ಲಿ ಹಾದಿ ಜನಪ್ರಿಯತೆಗಳಿಸಿದ್ದರು. ಇದೀಗ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಫರ್ಧಿಸುವ ಸಲುವಾಗಿ ಡಿಸೆಂಬರ್ 12 ರಂದು ಢಾಕಾ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ ಮುಸುಕುಧಾರಿ ದುಷ್ಕರ್ಮಿಗಳು ಹಾದಿ ತಲೆಗೆ ಗುಂಡು ಹಾರಿಸಿದ್ದರು. ನಂತರ ಅವರನ್ನು ಸಿಂಗಾಪುರಕ್ಕೆ ಚಿಕಿತ್ಸೆಗೆಂದು ಕಳುಹಿಸಿದರೂ ಅವರು ಕೊನೆಗೆ ಸಾವನ್ನಪ್ಪಿದರು. ಇದರಿಂದ ಆಕ್ರೋಶ ಭುಗಿಲೆದ್ದಿದ್ದು, ಬಾಂಗ್ಲಾದೇಶದಾದ್ಯಂತ ಅಶಾಂತಿ ಮತ್ತು ಗಲಭೆಗೆ ನಾಂದಿ ಹಾಡಿತು ಎನ್ನಲಾಗಿದೆ.

0 Comments