ಜೈಪುರ : ಇತ್ತೀಚೆಗೆ ಯುವಕ ಯುವತಿಯರು ಇಯರ್ ಫೋನ್‌ಗಿಂತ ಬಡ್‌ಗಳನ್ನೇ ಹೆಚ್ಚಾಗಿ ಬಳಸುತ್ತಿದ್ದು, ಕಿವಿಗೆ ಬಡ್‌ಗಳನ್ನು ಸಿಕ್ಕಿಸಿಕೊಂಡು ಒಬ್ಬೊಬ್ಬರೇ ಮಾತನಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೆ ಇದು ಅಪಾಯಕಾರಿ ಎಂಬುದಕ್ಕೆ ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಸಾಕ್ಷಿಯಾಗಿದೆ.
ಇಯರ್ ಬಡ್ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡು ಯುವತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ರಾಜಸ್ಥಾನದ ಮೆಡಿಕಲ್ ವಿದ್ಯಾರ್ಥಿನಿಯೊಬ್ಬರು, ಜೆಬಿಎಲ್ ಟ್ಯೂನ್ ಬೀಮ್ 2 ಇಯರ್‌ಬಡ್ ಕಿವಿಗೆ ಹಾಕಿರುವಾಗಲೇ ಸ್ಫೋಟಗೊಂಡು ತಮ್ಮ ಕಿವಿಗೆ ಹಾನಿಯಾಗಿರುವುದಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ವಿದ್ಯಾರ್ಥಿನಿ ವೈದ್ಯಕೀಯ ಪ್ರಿಸ್ಕ್ರಿಪ್ಷನ್ ಕೂಡಾ ಹಂಚಿಕೊಂಡಿದ್ದು, ಅದರಲ್ಲಿ ಘಟನೆಯ ಬಳಿಕ ಯುವತಿಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದಿದೆ. ಗಾಯಕ್ಕೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಲಾಗಿದೆ.
ಜೆಬಿಎಲ್ ಇಯರ್ ಬಡ್ ಕಂಪನಿ ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಈ ದೂರನ್ನು ಗಮನಿಸಿದ್ದಾಗಿ ಹೇಳಿದೆ. ಅಲ್ಲದೇ ಈ ವಿಚಾರವನ್ನು ಭಾರತದ ತಂಡಕ್ಕೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿರುವುದಾಗಿ ಹಾಗೂ ಬಳಕೆದಾರರ ಜೊತೆ ನೇರ ಸಂಪರ್ಕಕ್ಕೆ ಸೂಚಿಸಿರುವುದಾಗಿಯೂ ಹೇಳಿದೆ. ಜೊತೆಗೆ ಬ್ರ್ಯಾಂಡ್ ಪರಿಸ್ಥಿತಿಯನ್ನು ತನಿಖೆ ಮಾಡುತ್ತಿದೆ ಎಂದು ದೃಢಪಡಿಸಿದೆ.

0 Comments