ಮೈಸೂರು : ನಾಗರಿಕ ಸಮಾಜ ತಲೆತಗ್ಗಿಸುವಂತಹ ಅಮಾನುಷ ಪ್ರಕರಣವೊಂದು ಕರ್ನಾಟಕದ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವಕನನ್ನು ಅಪಹರಿಸಿ, ಬಲವಂತವಾಗಿ ಮಂಗಳಮುಖಿ ವೇಷ ಧರಿಸಲು ಒತ್ತಾಯಿಸಿ, ಸೆಕ್ಸ್ ವರ್ಕ್ ಹಾಗೂ ಹಣ ವಸೂಲಿಗೆ ಬಳಸಿಕೊಂಡಿರುವ ಭೀಕರ ಜಾಲ ಬಯಲಾಗಿದೆ.
ಮೈಸೂರು ಜಿಲ್ಲೆಯ ನಂಜನಗೂಡಿನ ತ್ಯಾಗರಾಜ ಕಾಲೋನಿಯ ಯುವಕ ಅನಿಲ್ ಕುಮಾರ್, 4 ತಿಂಗಳ ಹಿಂದೆ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಬಸ್ ಗಾಗಿ ಕಾಯುತ್ತಿದ್ದಾಗ ಮಂಗಳೂರಿನ ಅನಿತಾ ಎಂಬ ಮಂಗಳಮುಖಿ ಮತ್ತು ಆಕೆಯ ತಂಡ, ಮುಖಕ್ಕೆ ಮುಸುಕು ಹಾಕಿ ಅನಿಲ್ ನನ್ನು ಮಂಗಳೂರಿಗೆ ಕರೆದೊಯ್ದಿದ್ದಾಗಿ ಆರೋಪಿಸಲಾಗಿದೆ. ಬಳಿಕ ಬಲವಂತವಾಗಿ ಸೀರೆ, ನೈಟಿ, ಕಿವಿಗೆ ಓಲೆ, ಮೂಗಿಗೆ ಬೊಟ್ಟು ಹಾಕಿ ಮಂಗಳಮುಖಿಯಂತೆ ವೇಷ ಹಾಕಿಸಿ ಬೀದಿಗಳಲ್ಲಿ ಅಂಗಡಿಗಳ ಮುಂದೆ ಕಲೆಕ್ಷನ್ ಮಾಡಿಸಿದ್ದಾರೆ. ಪ್ರತಿದಿನ 2 ರಿಂದ 3 ಸಾವಿರ ಕಲೆಕ್ಷನ್ ಮಾಡಿಸಿ ರೀಲ್ಸ್ ತಯಾರಿಸಿ ಸಾಮಾಜಿಕ ಜಾಲತಾಣದಲ್ಲೂ ಅಪ್‌ಲೋಡ್ ಮಾಡಿದ್ದಾರೆ. ಅಲ್ಲದೇ ಮಂಗಳೂರು, ಕೇರಳ ಭಾಗಗಳಿಗೆ ಕಳಿಸಿ ಸೆಕ್ಸ್ ವರ್ಕ್‌ಗೆ ಬಳಕೆ ಮಾಡಿದ್ದಾರೆ. ಆಧಾರ್ ಕಾರ್ಡ್‌ನಲ್ಲಿ ಟ್ರಾನ್ಸ್‌ಜೆಂಟರ್ ಎಂದು ನಮೂದಿಸಿ ಸಮಾಜ ಕಲ್ಯಾಣ ಇಲಾಖೆಯಿಂದ ಸಹ ಅಧಿಕೃತ ಸರ್ಟಿಫಿಕೇಟ್ ಕೊಡಿಸಿದ್ದಾರೆ. ಬಾಂಬೆಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮೂಲಕ ಶಾಶ್ವತವಾಗಿ ಮಂಗಳಮುಖಿಯಾಗಿ ಕನ್ವರ್ಟ್ ಮಾಡಲು ಸ್ಕೆಚ್ ಹಾಕಿದ್ದು, ಈ ಮಾಹಿತಿ ಅರಿತ ಅನಿಲ್ ಕುಮಾರ್ ಕರಾಳ ದಂಧೆಯ ಕಪಿಮುಷ್ಠಿಯಿಂದ ಹೊರಬರಲು ನಿರ್ಧರಿಸಿ ತನ್ನ ಸಂಪಾದನೆ 3 ಲಕ್ಷ ಕೊಡುವಂತೆ ಕೇಳಿದರು. ಆಗ ತನ್ನ ಮನೆಯಿಂದ 5 ಲಕ್ಷ ನಗದು ಚಿನ್ನಾಭರಣ ಕಳ್ಳತನ ಮಾಡಿರುವುದಾಗಿ ಸುಳ್ಳು ದೂರು ದಾಖಲಿಸಿ ಜೈಲಿಗೆ ಹಾಕಿಸುತ್ತೇನೆಂದು ಅನಿತಾ ಬೆದರಿಕೆ ಹಾಕಿದ್ದಾರೆ. ಮನನೊಂದ ಅನಿಲ್ ಕುಮಾರ್ ದಾಖಲೆಗಳು ಸರ್ಟಿಫಿಕೇಟ್ ಸಮೇತ ಮಂಗಳೂರು ತೊರೆದು ನಂಜನಗೂಡು ಸೇರಿಕೊಂಡಿದ್ದಾರೆ. ಮತ್ತೆ ದಂಧೆ ಮಾಡಿಸಲು ಅನಿತಾ ಮಂಗಳಮುಖಿಯರನ್ನು ಅನಿಲ್ ಕುಮಾರ್ ಮನೆಗೆ ಕಳಿಸಿ ಗಲಾಟೆ ಮಾಡಿಸಿದ್ದಾರೆ. ಹೀಗಾಗಿ ಅನಿಲ್ ಕುಮಾರ್ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

0 Comments