ಪೆರ್ಲ: ಮಾನವನ ಸಂಕಲ್ಪಕ್ಕಿಂತ ಮಿಗಿಲಾದ ಶಕ್ತಿ ಬೇರೊಂದಿಲ್ಲ. ಮನಸ್ಸಿನಲ್ಲಿ ದೃಢವಾದ ಉದ್ದೇಶ, ಗುರಿಯನ್ನು ಇಟ್ಟುಕೊಂಡರೆ ಏನನ್ನೂ ಸಾಧಿಸಬಹುದು. ಇಚ್ಛಾಶಕ್ತಿ ಯಶಸ್ಸಿನ ಮೂಲವಾಗಿದ್ದು, ಸಕಾರಾತ್ಮಕ ಬದಲಾವಣೆಗೆ ದಾರಿ ಮಾಡಿಕೊಡುವುದು. ದೇಗುಲದ ಜೀರ್ಣೋದ್ಧಾರ ಮಾನವನ ಆತ್ಮೋದ್ಧಾರಕ್ಕೆ ಪ್ರೇರಣೆಯಾಗುವುದು. ವರ್ತಮಾನದ ಶಕ್ತಿಯ ಸದ್ಬಳಕೆಯಿಂದ ಭವಿಷ್ಯದಲ್ಲಿ ಫಲ ನೀಡುವುದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು. ನೆಲ್ಲಿಕುಂಜೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ನವೀಕರಣ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿ, ಧೀಶಕ್ತಿಯಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಒಗ್ಗಟ್ಟು, ಸಮಭಾವ, ತ್ಯಾಗ ಮತ್ತು ಸಹನೆ, ಸನಾತನ ಧರ್ಮದ ಮೂಲತತ್ವ. ಪ್ರಕೃತಿಯಲ್ಲಿ ದೈವಿಕತೆಯನ್ನು ಕಾಣಬೇಕು. ಮುಗ್ದ ಭಕ್ತಿಗೆ ದೇವರು ಒಲಿಯುತ್ತಾನೆ. ದೇವಸ್ಥಾನ ಕಟ್ಟುವುದು ಮಹಾತ್ಕಾರ್ಯವಲ್ಲ. ದೇವಸ್ಥಾನವನ್ನು ಬೆಳೆಸುವುದು, ಪಾವಿತ್ರ್ಯತೆ ಉಳಿಸುವುದು ಮುಖ್ಯ. ದೇವಸ್ಥಾನದ ಪ್ರತಿಯೊಂದು ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಮಾನಾಥ ರೈ ಮೇಗಿನಕಡಾರು ಅಧ್ಯಕ್ಷತೆ ವಹಿಸಿದ್ದರು. ಪ್ರವಚನಕಾರ ನಟರಾಜ ಪರ್ಕಳ ಮಾತನಾಡಿ, ಕ್ಷೇತ್ರಗಳು ಸಮಾಜದ ಕೇಂದ್ರಬಿಂದು. ಸನಾತನ ಧರ್ಮದ ರಕ್ಷಣೆಯಲ್ಲಿ ದೇವಸ್ಥಾನಗಳು ಪ್ರಧಾನ ಪಾತ್ರ ವಹಿಸುತ್ತಿವೆ. ಒಗ್ಗಟ್ಟು ಹಾಗೂ ಸಾಮಾಜಿಕ ಕಳಕಳಿಯಿಂದ ದೇಶವನ್ನು ರಕ್ಷಿಸಬೇಕು. ಧರ್ಮ ಎನ್ನುವುದು ಗುರುತರ ಜವಾಬ್ದಾರಿ. ಧರ್ಮದಿಂದ ಸಂಪಾದನೆ ಮಾಡಿ ದೈವಿಕ ಕಾರ್ಯದಲ್ಲಿ ವಿನಿಯೋಗಿಸಬೇಕು. ಮುಗುಳ್ನಗೆಯೂ ದಾನ. ಭೌತಿಕ ಸಹಾಯ ಸಾಧ್ಯವಿಲ್ಲದಿದ್ದರೆ ಶಕ್ತಿ, ಸಾಮರ್ಥ್ಯವನ್ನು ದಾನ ಮಾಡಬೇಕು. ಆರ್ಥಿಕ ಶಕ್ತಿ, ಧಾರ್ಮಿಕತೆ ಮಾನವೀಯತೆಯಿಂದ ಸುಕೃತಿ ಪಡೆಯಬೇಕು. ದೇವರ ನಂಬಿಕೆಯಿಂದ ಆತ್ಮಬಲ ತುಂಬುವುದು. ಸದ್ಗುಣ ಸಂಸ್ಕೃತಿಗಳಿಂದ ಸಮಾಜ ಸದೃಢವಾಗಬಲ್ಲುದು ಎಂದರು.
ಬದಿಯಡ್ಕ ಗ್ರಾಪಂ ಅಧ್ಯಕ್ಷ ಶಂಕರ ಡಿ., ಸದಸ್ಯ ಮಧುಸೂದನ ಕಂಗಿಲ, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲು ಅಧ್ಯಕ್ಷ ಜಯದೇವ ಖಂಡಿಗೆ, ಡಾ. ಶ್ರೀಪತಿ ಕಜಂಪಾಡಿ, ಇಡಿಯಡ್ಕ ಕ್ಷೇತ್ರದ ಕಾರ್ಯದರ್ಶಿ ಸದಾನಂದ ಶೆಟ್ಟಿ ಕುದ್ವ, ರಾಜ್ಯ ಕಿರು ಕೈಗಾರಿಕಾ ಸಂಘಟನೆ ಕಾಸರಗೋಡು ಜಿಲ್ಲಾಧ್ಯಕ್ಷ ರಾಜಾರಾಮ ಪೆರ್ಲ, ಡಾ.ಜಯದೇವ ಕಂಗಿಲ, ಡಾ.ಜಯಗೋವಿಂದ ಉಕ್ಕಿನಡ್ಕ ಮಾತನಾಡಿದರು. ಚೇರ್ಕಬೆ ಕ್ಷೇತ್ರದ ಮೊಕ್ತೇಸರ ಕಾರ್ಯದರ್ಶಿ ಕೃಷ್ಣ ಭಟ್ ಕೋಟೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮಹೇಶ ಗುತ್ತು ಸ್ವಾಗತಿಸಿದರು. ಖಜಾಂಚಿ ಗೋಪಾಲಕೃಷ್ಣ ಶರ್ಮ ಸರವು ವಂದಿಸಿದರು. ಸುರೇಶ ನೆಲ್ಲಿಕುಂಜೆ ನಿರೂಪಿಸಿದರು.

0 Comments