ಕಾಸರಗೋಡು : ಪತ್ರಿಕಾ ಛಾಯಾಗ್ರಾಹಕ ಶ್ರೀಕಾಂತ ಕಾಸರಗೋಡು ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ. ಬೀದರ್ ನಲ್ಲಿ ಎಪ್ರಿಲ್ 11ಮತ್ತು 12 ರಂದು ನಡೆಯುವ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಉದಯವಾಣಿ ಪತ್ರಿಕೆಯಲ್ಲಿ ವೃತ್ತಿಜೀವನ ಆರಂಭಿಸಿದ ಶ್ರೀಕಾಂತ ಅವರ ಛಾಯಾಚಿತ್ರಗಳು ಹೆಚ್ಚಿನ ಕನ್ನಡ ಮತ್ತು ಮಲಯಾಳ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕೆಲವು ವರ್ಷಗಳಿಂದ ಅವರು ಕೇರಳ ಸರಕಾರದ ವಾರ್ತಾ ಇಲಾಖೆಯ ಕಾಸರಗೋಡು ಜಿಲ್ಲಾ ಕೇಂದ್ರದ ಛಾಯಾಗ್ರಾಹಕರು. ಜೊತೆಗೆ ಸಮಾಜ ಸೇವೆ , ಸಾಂಸ್ಕೃತಿಕ - ಧಾರ್ಮಿಕ ಸಂಘಟನೆಗಳಲ್ಲೂ ತೊಡಗಿಸಿಕೊಂಡಿದ್ದಾರೆ.
ಆಲ್ ಕೇರಳಾ ಫೊಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಘಟಕದ ಮಾಜಿ ಅಧ್ಯಕ್ಷ ರಾಗಿದ್ದರಲ್ಲದೆ ಈಸ್ಟ್ ಯುನಿಟ್ ನ ಕೋಶಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಕಾಸರಗೋಡಿನಲ್ಲಿ ಕನ್ನಡದ ಸಂರಕ್ಷಣೆಗಾಗಿ ನಡೆಯುತ್ತಿರುವ ಹೋರಾಟದಲ್ಲೂ ಸಕ್ರಿಯರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಶೇಷ ಪ್ರಶಸ್ತಿಗೆ ಭಾಜನರಾದ ಶ್ರೀಕಾಂತ ಕಾಸರಗೋಡು ಅವರನ್ನು ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಅಭಿನಂದಿಸಿವೆ.

0 Comments