ಬೆಂಗಳೂರು : ತಳಮಟ್ಟದ ಹೋರಾಟದಿಂದ ಪಕ್ಷವನ್ನು ಕಟ್ಟಿ ಬೆಳೆಸಿದ ಡಿ.ಕೆ. ಶಿವಕುಮಾರ್ ಅವರು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಬೆಂಗಳೂರಿನ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ನಡೆದ ಪ್ರಮಾಣವಚನ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಿಕೆ ಶಿವಕುಮಾರ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಸಂವಿಧಾನ ಪುಸ್ತಕ ಹಿಡಿದ ಡಿಕೆ ಶಿವಕುಮಾರ್ ಅವರು ನೊಣವಿನಕೆರೆ ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಮಾಣ ವಚನ ಸ್ವೀಕರಿಸುವ ಮೊದಲು ವೇದಿಕೆಯಲ್ಲಿ ಡಿಕೆ ಶಿವಕುಮಾರ ನೆಲಕ್ಕೆ ಅಡ್ಡ ಬಿದ್ದು ನಮಸ್ಕರಿಸಿದರು. ಬಳಿಕ ಅಜ್ಜಯ್ಯನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಹಿನ್ನೆಲೆಯಲ್ಲಿ ಅತ್ಯಂತ ಅಪರೂಪದ ಹಾಗೂ ಶಕ್ತಿಶಾಲಿ ‘ಮಾಲವ್ಯ ಯೋಗ’ದ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು.
ತುಲಾ ಲಗ್ನದಲ್ಲಿ ಡಿಕೆಶಿ ಅವರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಪ್ರಸ್ತುತ ಜಾತಕದಲ್ಲಿ ಗುರು ಗ್ರಹವು ಉಚ್ಚ ಸ್ಥಿತಿಯಲ್ಲಿದ್ದು, ದಶಮ ಭಾವ ಬಲವಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಎಷ್ಟು ದೊಡ್ಡ ಸವಾಲುಗಳು ಎದುರಾದರೂ ಅದನ್ನೆಲ್ಲ ಮೆಟ್ಟಿ ನಿಂತು ಜನಪರ ಹಾಗೂ ಸುಗಮ ಆಡಳಿತ ನಡೆಸಲು ಈ ಮುಹೂರ್ತ ಹಾದಿ ಸುಗಮ ಮಾಡಿಕೊಡಲಿದೆ ಎಂಬ ಬಲವಾದ ನಂಬಿಕೆ ಇದೆ.
ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬಳಿಕ ಕಾಂಗ್ರೆಸ್ ಶಾಸಕರ ಸಭೆಯಲ್ಲಿ ಏಕಮತದಿಂದ ಆಯ್ಕೆಯಾದ ಡಿ.ಕೆ.ಶಿವಕುಮಾರ್ ಅವರು ಇಂದು 25ನೇ ಮುಖ್ಯಮಂತ್ರಿಯಾಗಿ ಹೊಸ ಅಧ್ಯಾಯ ಆರಂಭಿಸಿದರು. ಈ ನಾಯಕತ್ವ ಬದಲಾವಣೆ ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ತಿರುವಾಗಿದೆ. 2023ರ ಚುನಾವಣಾ ಒಪ್ಪಂದದಂತೆ ಅಧಿಕಾರ ಹಸ್ತಾಂತರವಾಗುತ್ತಿರುವುದು ಕಾಂಗ್ರೆಸ್ ಪಕ್ಷದ ಏಕತೆಯನ್ನು ಎತ್ತಿ ತೋರಿಸಿದೆ.

0 Comments