ಕಾಸರಗೋಡು : ಕಳೆದ ಮಳೆಗಾಲದಲ್ಲಿ ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ತುರ್ತು ಮುನ್ನೆಚ್ಚರಿಕೆ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದು ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ತಿಳಿಸಿದ್ದಾರೆ. ಮಳೆಗಾಲದಲ್ಲಿ ಭೂಕುಸಿತಕ್ಕೆ ಒಳಗಾಗುವ ಸಾಧ್ಯತೆ ಇರುವ ಚೆರ್ಕಳ-ಬೇವಿಂಜ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಪ್ರಗತಿಯನ್ನು ಪರಿಶೀಲಿಸಲು ಜಿಲ್ಲಾಧಿಕಾರಿ ಭೇಟಿ ನೀಡಿದ್ದರು. ಬೇವಿಂಜ ಮತ್ತು ವೀರಮಲ ಕುನ್ನು ವಿಭಾಗಗಳಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಸಂಬಂಧಿಸಿದ ಅಗತ್ಯ ಕಾಮಗಾರಿಯನ್ನು ಪ್ರತಿದಿನ ನಿರ್ವಹಿಸುತ್ತಿದ್ದು, ಮಳೆಗಾಲಕ್ಕೆ ಮುನ್ನ ನಿರೀಕ್ಷಿಸಿದಷ್ಟು ಕೆಲಸಗಳು ನಡೆದಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು. ಚೆರ್ಕಳ ಪೇಟೆ ಮತ್ತು ಚೆಂಗಳ ಪಂಚಾಯತ್ ಕಚೇರಿ ಆವರಣದಲ್ಲಿ ಅಪೂರ್ಣ ನಿರ್ಮಾಣದಿಂದಾಗಿ ಎದುರಾಗಿರುವ ಸಮಸ್ಯೆಗಳನ್ನು ತಕ್ಷಣ ಪರಿಹರಿಸುವಂತೆ ಜಿಲ್ಲಾಧಿಕಾರಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದರು. ಕಾಲುವೆಗಳನ್ನು ನೀರಿನಿಂದ ತುಂಬದಂತೆ ಮತ್ತು ಮನೆಗಳು ನೀರಿನಲ್ಲಿ ಮುಳುಗಡೆಯಾಗದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಲ್ಲುವಿಕೆ ಮತ್ತು ಭೂಕುಸಿತವನ್ನು ತಡೆಗಟ್ಟಲು ಚರಂಡಿಗಳು ಮತ್ತು ಸುರಕ್ಷತಾ ಗೋಡೆಗಳನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಪೋಟೋ : ಶ್ರೀಕಾಂತ್ ಕಾಸರಗೋಡು

0 Comments