ಉಡುಪಿ : ಭಾಷೆ, ಸಾಹಿತ್ಯ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ ಖ್ಯಾತ ಸಾಹಿತಿ ಡಾ. ಟಿ.ಎನ್. ನಾಗರತ್ನ ಅವರಿಗೆ ಪ್ರತಿಷ್ಠಿತ ಸೇಡಿಯಾಪು ಪ್ರಶಸ್ತಿ-2026 ಘೋಷಿಸಲಾಗಿದೆ. ಈ ಪ್ರಶಸ್ತಿಯನ್ನು ಗೋವಿಂದ ಪೈ ಸಂಶೋಧನ ಕೇಂದ್ರ ಪ್ರಕಟಿಸಿದೆ.
ಡಾ. ಟಿ.ಎನ್. ನಾಗರತ್ನ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಡಾಕ್ಟರೇಟ್ (ಪಿಎಚ್‌ಡಿ) ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ, ಹರಿದಾಸ ಸಾಹಿತ್ಯ ವಿಭಾಗದ ಮುಖ್ಯಸ್ಥರಾಗಿ 2003ರಲ್ಲಿ ನಿವೃತ್ತರಾದರು. ಹರಿದಾಸ ಸಾಹಿತ್ಯದ ಸಂಶೋಧನೆ, ಸಂಪಾದನೆ ಮತ್ತು ಅನುವಾದ ಕಾರ್ಯದಲ್ಲಿ ಇವರು ಮಹತ್ವದ ಕೊಡುಗೆ ನೀಡಿದ್ದಾರೆ. ಕನಕದಾಸರು, ವಾದಿರಾಜರು, ಗೋಪಾಲದಾಸರು, ಜಗನ್ನಾಥದಾಸರು ಮತ್ತು ವ್ಯಾಸರಾಯರ ಕೃತಿಗಳ ಸಂಪಾದನೆ ಸೇರಿದಂತೆ ಹಲವು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ೧೯೮೦ರಲ್ಲಿ ಇವರ 'ಶ್ರೀ ವಾದಿರಾಜರ ಕೃತಿಗಳು' ಕೃತಿಗಾಗಿ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ೨೦೧೦ರಲ್ಲಿ ಹರಿದಾಸ ಸಾಹಿತ್ಯದ ಸಮಗ್ರ ಕೆಲಸಕ್ಕಾಗಿ 'ಕನಕಶ್ರೀ' ಪ್ರಶಸ್ತಿಗೂ ಭಾಜನರಾಗಿದ್ದಾರೆ. 'ಸಾಹಿತ್ಯ ಸರಸ್ವತಿ', 'ಹೊಯ್ಸಳ' ಪ್ರಶಸ್ತಿ ಹಾಗೂ 'ಹರಿದಾಸ ಸಾಹಿತ್ಯ ವಿದ್ವನ್ಮಣಿ' ಸೇರಿದಂತೆ ಹಲವು ಗೌರವಗಳಿಗೆ ಪಾತ್ರರಾಗಿರುವ ಡಾ. ಟಿ.ಎನ್. ನಾಗರತ್ನ ಅವರು 2026ನೇ ಸಾಲಿನ ಸೇಡಿಯಾಪು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸಾಹಿತ್ಯ ಮತ್ತು ಸಂಶೋಧನಾ ವಲಯದಲ್ಲಿ ಸೇಡಿಯಾಪು ಪ್ರಶಸ್ತಿಯು ಮಹತ್ವದ ಗೌರವವಾಗಿ ಪರಿಗಣಿಸಲ್ಪಡುತ್ತದೆ. ಕನ್ನಡ ಸಾರಸ್ವತ ಲೋಕದಲ್ಲಿ ಭಾಷೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಅಪಾರ ಕೊಡುಗೆ ನೀಡಿರುವ ಸೇಡಿಯಾಪು ಕೃಷ್ಣ ಭಟ್ಟರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಪ್ರಶಸ್ತಿಯು 10,000 ರೂಪಾಯಿ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿರುತ್ತದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಜುಲೈ 18, 2026ರಂದು ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.

0 Comments