Header Ads Widget

Responsive Advertisement

ಪ್ರಮುಖ ಸುದ್ದಿ

6/recent/ticker-posts

ಜಾಹೀರಾತು

Responsive Advertisement

ಹಲಸು - ಮಾವು ಮೇಳದಲ್ಲಿ 'ರಾಮಧಾನ್ಯ ಚರಿತ್ರೆ' ತುಳು ಕಾವ್ಯವಾಚನ - ವ್ಯಾಖ್ಯಾನ

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರು ಸಾವಯವ ಕೃಷಿಕ ಬಳಗದ ಸಹಯೋಗದಲ್ಲಿ ಜೂನ್ 20, 21ರಂದು ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜು ಪ್ರಾಸಾದದಲ್ಲಿ ಏರ್ಪಡಿಸಿದ್ದ ಎರಡು ದಿನಗಳ 'ಹಲಸು - ಮಾವು ಮೇಳ'ದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶ್ರೀ ವಿಶ್ವೇಶತೀರ್ಥ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲನೇ ದಿನ ಸಂತ ಕವಿ ಕನಕದಾಸರ 'ರಾಮಧಾನ್ಯ ಚರಿತ್ರೆ' ಕಾವ್ಯ ಆಧಾರಿತ ತುಳು ಪುರಾಣ ಪ್ರವಚನ ಕಾರ್ಯಕ್ರಮವನ್ನು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಹರಿದಾಸ - ಗಾಯಕ ತೋನ್ಸೆ ಪುಷ್ಕಳ ಕುಮಾರ್ ನಡೆಸಿಕೊಟ್ಟರು.

ಕರ್ನಾಟಕ ಸರಕಾರದ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಯೋಜನೆಯಂತೆ ದೇಶದ 14 ಭಾಷೆಗಳಲ್ಲಿ ಅನುವಾದಗೊಂಡು ಈಚೆಗೆ ಬಿಡುಗಡೆಯಾಗಿದ್ದ 'ರಾಮಧಾನ್ಯ ಚರಿತ್ರೆ'ಯ ತುಳು ಆವೃತ್ತಿಯನ್ನು ಪ್ರಥಮ ಬಾರಿಗೆ ಹಲಸು ಮಾವು ಮೇಳದಲ್ಲಿ ವಾಚನ - ವ್ಯಾಖ್ಯಾನಕ್ಕೆ ಅಳವಡಿಸಿಕೊಂಡಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಪ್ರೊ| ಎ.ವಿ.ನಾವಡರ ಪ್ರಧಾನ ಸಂಪಾದಕತ್ವದಲ್ಲಿ ಕನಕದಾಸರ ಒಟ್ಟು ಆರು ಕಾವ್ಯಕೃತಿಗಳು ತುಳುವಿಗೂ ಅನುವಾದಗೊಂಡಿದ್ದು ಡಾ| ಕಾತ್ಯಾಯಿನಿ ಕುಂಜಿಬೆಟ್ಟು ರಾಮಧಾನ್ಯ ಚರಿತ್ರೆಯನ್ನು ತುಳು ಭಾಷಾಂತರ ಮಾಡಿದ್ದರು.

ಅಕ್ಕಿ - ರಾಗಿಗಳ ಮೇಲಾಟದ ಕಥೆ

ಶ್ರೀರಾಮಚಂದ್ರನು ರಾವಣಾದಿಗಳನ್ನು ವಧಿಸಿ ಅಯೋಧ್ಯೆಗೆ ಮರಳುವ ಮಾರ್ಗ ಮಧ್ಯೆ ಗೌತಮಾಶ್ರಮದಲ್ಲಿ ತಂಗಿದ್ದಾಗ ಅಲ್ಲಿದ್ದ ಋಷಿಮುನಿಗಳು ಶ್ರೀರಾಮನ ಪರಿವಾರಕ್ಕೆ ನವಧಾನ್ಯಗಳಿಂದ ಸಿದ್ಧವಾದ ಭಕ್ಷ್ಯ ಭೋಜ್ಯಗಳನ್ನು ಉಣಬಡಿಸುತ್ತಾರೆ. ಅದರಿಂದ ಸಂತುಷ್ಟನಾದ ಶ್ರೀರಾಮ ಆ ಧಾನ್ಯಗಳಲ್ಲಿ ಶ್ರೇಷ್ಠರಾರು ಎಂದು ಪ್ರಶ್ನಿಸಿದಾಗ ಗೌತಮರು ನೀಡಿದ ಉತ್ತರದಿಂದ ತಕ್ಷಣದಲ್ಲಿ ಗೊಂದಲವುಂಟಾಗಿ ಅಕ್ಕಿ - ರಾಗಿಗಳ ನಡುವೆ ಮೇಲಾಟ ನಡೆಯುತ್ತದೆ. ಉಭಯ ಧಾನ್ಯಗಳನ್ನು ಗೌತಮಾಶ್ರಮದಲ್ಲಿ ಸೆರೆಯಲ್ಲಿಟ್ಟು ರಾಮ ಅಯೋಧ್ಯೆಗೆ ಬಂದು ಪಟ್ಟಾಭಿಷಿಕ್ತನಾದ ಬಳಿಕ ಅಕ್ಕಿ, ರಾಗಿಗಳನ್ನು ಕರೆಸಿ ಇಂದ್ರಾದಿ ದೇವತೆಗಳ ಸಮ್ಮುಖದಲ್ಲಿ ಮತ್ತೊಮ್ಮೆ ವಿಚಾರಣೆಗೊಳಪಡಿಸಿದಾಗ  ಆರು ತಿಂಗಳು ಸೆರೆಯಲ್ಲಿದ್ದು ಒಂದಷ್ಟೂ ಕಳೆಗುಂದದ ರಾಗಿಯೇ ಶ್ರೇಷ್ಠ ಎಂದು ತೀರ್ಮಾನವಾಯಿತು.  ರಾಜಾರಾಮನು ಅಕ್ಕಿ ರಾಗಿಗಳಿಬ್ಬರನ್ನೂ ಸಮಾಧಾನಪಡಿಸಿ ಸಮಾಜದಲ್ಲಿ ಮೇಲು ಕೀಳು ಭಾವನೆಗಳು ಎಂದಿಗೂ ಸರಿಯಲ್ಲ ಎಂಬ ಸಂದೇಶ ನೀಡುವುದೇ ಈ ಕಾವ್ಯದ ತಿರುಳು. ಇದಾದ ಬಳಿಕ ರಾಗಿಗೆ ರಾಮಾನುಗ್ರಹದಿಂದ 'ರಾಮಧಾನ್ಯ(ರಾಘವ)' ಎಂದು ಹೆಸರಾಗುತ್ತದೆ.

ಕಾರ್ಯಕ್ರಮದಲ್ಲಿ ತೋನ್ಸೆ ಪುಷ್ಕಳ ಕುಮಾರ್ ಅವರು 'ರಾಮಧಾನ್ಯ ಚರಿತ್ರೆ' ಕಾವ್ಯವನ್ನು ವಾಚಿಸಿದರು. ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ತುಳು ಭಾಷೆಯಲ್ಲಿ ವ್ಯಾಖ್ಯಾನ ನೀಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ್ ಕಲ್ಕೂರ ಅವರು ಕಲಾವಿದರನ್ನು ಅಭಿನಂದಿಸಿ ಗೌರವಿಸಿದರು. ಪ್ರಮುಖರಾದ ರವೀಂದ್ರ ಶೇಟ್, ಹೆಚ್. ಜನಾರ್ದನ ಹಂದೆ, ಭಾಸ್ಕರ್ ರಾವ್, ಮಧುಸೂದನ ಅಲೆವೂರಾಯ ವರ್ಕಾಡಿ, ಎಡ್ವರ್ಡ್ ಲೋಬೋ ತೊಕ್ಕೊಟ್ಟು ಉಪಸ್ಥಿತರಿದ್ದರು. ಪೂರ್ಣಿಮಾ ಪ್ರಭಾಕರ ರಾವ್ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Post a Comment

0 Comments



ಜಾಹೀರಾತು

Responsive Advertisement