ಪೆರ್ಲ: ಆದಿವಾಸಿ ಕ್ಷೇಮ ಸಮಿತಿ (ಎಕೆಎಸ್) ಕುಂಬಳೆ ಏರಿಯಾ ಸಮ್ಮೇಳನವು ಪೆರ್ಲ ವ್ಯಾಪಾರಿ ಭವನದಲ್ಲಿರುವ ದಿ.ಕಾಂ. ಸದಾನಂದ ನಾಯ್ಕ ಮಾಸ್ಟರ್ ವೇದಿಕೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಎಕೆಎಸ್ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಹಾಗೂ ರಾಜ್ಯ ಸಮಿತಿ ಸದಸ್ಯ ಅಶೋಕನ್ ಕುನ್ನೋಚಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೇರಳ ರಾಜ್ಯ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ (KEAM) ಎಸ್‌ಟಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಪೆರ್ಲದ ಹೇಮಂತ್ ರಾಮ್ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು +2 ಪರೀಕ್ಷೆಯಲ್ಲಿ ಸಂಪೂರ್ಣ ಎ+ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ರಕ್ತಸಾಕ್ಷಿ ನಿರ್ಣಯ, ಅನುಸೂಚನಾ ನಿರ್ಣಯ ಹಾಗೂ ಅಭಿನಂದನಾ ಕಾರ್ಯಕ್ರಮದ ಬಳಿಕ ಏರಿಯಾ ಕಾರ್ಯದರ್ಶಿ ಶಾರದಾ ಬದಿಯಡ್ಕ ಸಂಘಟನಾ ವರದಿ ಮಂಡಿಸಿದರು. ಚರ್ಚೆ ಹಾಗೂ ಉತ್ತರಗಳ ನಂತರ ವರದಿಯನ್ನು ಅಂಗೀಕರಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಚನಿಯಪ್ಪ ನಾಯ್ಕ (ಕಾಟುಕುಕ್ಕೆ), ಕಾರ್ಯದರ್ಶಿಯಾಗಿ ಶಾರದಾ ಬದಿಯಡ್ಕ, ಕೋಶಾಧಿಕಾರಿಯಾಗಿ ವಿಜಯಕುಮಾರ್ ಬಾಳೆಮೂಲೆ, ಜಂಟಿ ಕಾರ್ಯದರ್ಶಿಯಾಗಿ ದೀಕ್ಷಿತ್ ಬದಿಯಡ್ಕ, ಉಪಾಧ್ಯಕ್ಷರಾಗಿ ಅಶೋಕ್ ಚವರ್ಕಾಡ್ ಹಾಗೂ ವಾಸು ನಾಯ್ಕ ಶೆಟ್ಟಿಬೈಲು ಆಯ್ಕೆಯಾಗಿದ್ದು, ಇತರ 11 ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಖಜಾಂಚಿ ಪುಷ್ಪ ಬೆದ್ರಂಪಳ್ಳ, ಜಿಲ್ಲಾ ಸಮಿತಿ ಸದಸ್ಯರಾದ ಬಾಲಕೃಷ್ಣನ್ ಬೇಡಡ್ಕ ಮತ್ತು ಚಂದ್ರ ಪೈವಳಿಕೆ ಮಾತನಾಡಿ, ಹಿಂದುಳಿದ ಆದಿವಾಸಿ ಸಮುದಾಯಗಳಿಗೆ ಆಗುತ್ತಿರುವ ಅನ್ಯಾಯ ಮತ್ತು ಅಸಮಾನತೆ ವಿರುದ್ಧ ಸಂಘಟಿತ ಹೋರಾಟದ ಅಗತ್ಯವನ್ನು ಒತ್ತಿಹೇಳಿದರು. ಆದಿವಾಸಿ ಸಮುದಾಯದ ಸಮಗ್ರ ಅಭಿವೃದ್ಧಿಗೆ ವರ್ಗ ಸಂಘಟನೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಮ್ಮೇಳನದ ಸಂಘಟನಾ ಸಮಿತಿ ಕನ್ವೀನರ್ ಹಾಗೂ ಸಿಪಿಐ(ಎಂ) ಎಣ್ಮಕಜೆ ಲೋಕಲ್ ಕಾರ್ಯದರ್ಶಿ ವಿನೋದ್ ಪೆರ್ಲ ಸ್ವಾಗತಿಸಿದರು. ಎಕೆಎಸ್ ಕುಂಬಳೆ ಏರಿಯಾ ಅಧ್ಯಕ್ಷ ಚನಿಯಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

0 Comments