ಕಾಸರಗೋಡು : ಕಾಸರಗೋಡು ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಯೊಬ್ಬನಿಗೆ ರ‍್ಯಾಗಿಂಗ್ ನಡೆಸಿದ ಆರೋಪದ ಹಿನ್ನೆಲೆಯಲ್ಲಿ 13 ಮಂದಿ ಹಿರಿಯ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಅಮಾನತುಗೊಳಿಸಿದೆ. ಜುಲೈ 13ರಂದು ಕಾಲೇಜು ಆವರಣದಲ್ಲಿ ಘಟನೆ ನಡೆದಿದ್ದು, ಕಾಲೇಜಿಗೆ ಬಂದಿದ್ದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳ ಗುಂಪೊಂದು ಬೆದರಿಸಿ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಘಟನೆಯ ಬಳಿಕ ವಿದ್ಯಾರ್ಥಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಅವರು ಕಾಲೇಜಿಗೆ ತೆರಳಿ ಪ್ರಾಂಶುಪಾಲರಿಗೆ ಲಿಖಿತ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಕಾಲೇಜು ಆಡಳಿತ ಪ್ರಾಥಮಿಕ ತನಿಖೆ ನಡೆಸಿ, ಆರೋಪ ಎದುರಿಸುತ್ತಿರುವ 13 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ರ‍್ಯಾಗಿಂಗ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ, ಘಟನೆ ಸಂಬಂಧ ವಿದ್ಯಾರ್ಥಿ ಪೊಲೀಸರಿಗೂ ದೂರು ನೀಡಿರುವುದಾಗಿ ತಿಳಿದುಬಂದಿದ್ದು, ಪ್ರಕರಣದ ಬಗ್ಗೆ ಪೊಲೀಸ್ ತನಿಖೆಯೂ ಆರಂಭವಾಗುವ ಸಾಧ್ಯತೆಯಿದೆ. ತನಿಖೆ ಪೂರ್ಣಗೊಂಡ ಬಳಿಕ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ. ಕಾಲೇಜು ಆವರಣದಲ್ಲಿ ರ‍್ಯಾಗಿಂಗ್ ಗೆ ಯಾವುದೇ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕಾಲೇಜು ಆಡಳಿತ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದೆ.
ಇಂತಹದ್ದೇ ರ‍್ಯಾಗಿಂಗ್ ಪ್ರಕರಣದಲ್ಲಿ ಮಂಜೇಶ್ವರ ಸಮೀಪದ ಪೈವಳಿಕೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಗೆ 10ನೇ ತರಗತಿಯ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ ಘಟನೆ ನಡೆದಿದೆ. ಗಾಯಗೊಂಡ ವಿದ್ಯಾರ್ಥಿಯನ್ನು ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೈವಳಿಕೆ ನಿವಾಸಿ ಜಲಾಲುದ್ದೀನ್ ಅವರ ಪುತ್ರ ಮೊಹಮ್ಮದ್ ಜೆದಿಂ (14) ಹಲ್ಲೆಗೆ ಒಳಗಾದ ವಿದ್ಯಾರ್ಥಿ. ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ 10ನೇ ತರಗತಿಯ ಕೆಲ ವಿದ್ಯಾರ್ಥಿಗಳು ಆತನನ್ನು ತಡೆದು ನಿಲ್ಲಿಸಿ, ಜೂನಿಯರ್ ವಿದ್ಯಾರ್ಥಿ ಎಂಬ ಕಾರಣಕ್ಕೆ ರ‍್ಯಾಗಿಂಗ್ ಮಾಡಲು ಯತ್ನಿಸಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದ ವಿದ್ಯಾರ್ಥಿಯ ಕುತ್ತಿಗೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಲ್ಪಾಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಪ್ಪಳ ಹಾಗೂ ಪೈವಳಿಕೆ ಭಾಗದ ಶಾಲೆಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ನಡೆಸುವುದು ಮತ್ತು ಹಲ್ಲೆ ಮಾಡುವುದು ಹೆಚ್ಚುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೈವಳಿಕೆ ಘಟನೆಯ ಬೆನ್ನಲ್ಲೇ ಉಪ್ಪಳದ ಮತ್ತೊಂದು ಶಾಲೆಯಲ್ಲಿಯೂ ಇದೇ ರೀತಿಯ ರ‍್ಯಾಗಿಂಗ್ ಪ್ರಕರಣ ವರದಿಯಾಗಿದ್ದು, ಬಳಿಕ ಸ್ಥಳೀಯರು ಹಾಗೂ ಶಾಲಾ ಆಡಳಿತದ ಮಧ್ಯಸ್ಥಿಕೆಯಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತ್ತು.
ಶಾಲೆಗಳಲ್ಲಿ ರ‍್ಯಾಗಿಂಗ್ ಹಾಗೂ ಮಾದಕವಸ್ತು ಬಳಕೆ ತಡೆಗಟ್ಟಲು ಪೊಲೀಸ್ ಇಲಾಖೆ ಮತ್ತು ಶಾಲಾ ಆಡಳಿತ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರೂ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಪೋಷಕರಲ್ಲಿ ಆತಂಕ ಮೂಡಿಸಿದೆ.

0 Comments