ನವದೆಹಲಿ : ಡೆಂಗ್ಯೂ ತಡೆಗಟ್ಟುವಲ್ಲಿ ಭಾರತ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ದೇಶದ ಮೊದಲ ಡೆಂಗ್ಯೂ ಲಸಿಕೆ 'ಕ್ಯೂಡೆಂಗಾ' (QDENGA) ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಣ ಪ್ರಾಧಿಕಾರ (DCGI) ಅನುಮೋದನೆ ನೀಡಿದೆ.
ಜಪಾನ್‌ನ ಔಷಧ ಉತ್ಪಾದನಾ ಸಂಸ್ಥೆ ಟಕೇಡಾ ಅಭಿವೃದ್ಧಿಪಡಿಸಿರುವ ಈ ಲಸಿಕೆಯನ್ನು 4ರಿಂದ 60 ವರ್ಷದೊಳಗಿನವರಿಗೆ ನೀಡಲು ಅನುಮತಿ ನೀಡಲಾಗಿದೆ. ಡೆಂಗ್ಯೂ ಸೋಂಕು ಈ ಹಿಂದೆ ಬಂದಿರಲಿ ಅಥವಾ ಬರದಿರಲಿ, ಈ ಲಸಿಕೆಯನ್ನು ಪಡೆಯಬಹುದಾಗಿದೆ. ಲಸಿಕೆ ನೀಡುವ ಮೊದಲು ಡೆಂಗ್ಯೂ ಪರೀಕ್ಷೆ ಮಾಡಿಸುವ ಅಗತ್ಯವೂ ಇರುವುದಿಲ್ಲ.
ಕ್ಯೂಡೆಂಗಾ ಲಸಿಕೆಯನ್ನು ಎರಡು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಮೊದಲ ಡೋಸ್ ನಂತರ ಮೂರು ತಿಂಗಳ ಅಂತರದಲ್ಲಿ ಎರಡನೇ ಡೋಸ್ ನೀಡಬೇಕಾಗುತ್ತದೆ. ಡೆಂಗ್ಯೂ ವೈರಸ್‌ನ ನಾಲ್ಕೂ ಪ್ರಭೇದಗಳ ವಿರುದ್ಧ ರಕ್ಷಣೆ ನೀಡುವಂತೆ ಈ ಲಸಿಕೆಯನ್ನು ಅಭಿವೃದ್ಧಿಪಡಿಸಲಾಗಿದೆ.
ಲಸಿಕೆಗೆ ಅನುಮೋದನೆ ನೀಡುವ ಮೊದಲು 19 ಹಂತಗಳ ಕ್ಲಿನಿಕಲ್ ಪರೀಕ್ಷೆ ನಡೆಸಲಾಗಿದ್ದು, ವಿಶ್ವದ ವಿವಿಧ ದೇಶಗಳ 28 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿಯೂ ಮೂರನೇ ಹಂತದ ಕ್ಲಿನಿಕಲ್ ಪರೀಕ್ಷೆಯಲ್ಲಿ 4ರಿಂದ 60 ವರ್ಷದೊಳಗಿನವರ ಮೇಲೆ ಸುರಕ್ಷತೆ ಹಾಗೂ ಪರಿಣಾಮಕಾರಿತ್ವವನ್ನು ಮೌಲ್ಯಮಾಪನ ಮಾಡಲಾಗಿದೆ.
ಈಗಾಗಲೇ 43 ದೇಶಗಳು ಕ್ಯೂಡೆಂಗಾ ಲಸಿಕೆಗೆ ಅನುಮೋದನೆ ನೀಡಿದ್ದು, ವಿಶ್ವದಾದ್ಯಂತ 3.2 ಕೋಟಿಗೂ ಹೆಚ್ಚು ಡೋಸ್‌ಗಳು ವಿತರಿಸಲಾಗಿದೆ. ಪ್ರತಿ ವರ್ಷ ಭಾರತದಲ್ಲಿ ಲಕ್ಷಾಂತರ ಜನರು ಡೆಂಗ್ಯೂ ಸೋಂಕಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ, ನಗರೀಕರಣ, ಹವಾಮಾನ ಬದಲಾವಣೆ ಹಾಗೂ ಸೊಳ್ಳೆಗಳ ಹೆಚ್ಚಳದಿಂದ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ಕ್ಯೂಡೆಂಗಾ ಲಸಿಕೆಗೆ ದೊರೆತಿರುವ ಅನುಮೋದನೆ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಆರೋಗ್ಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಡೆಂಗ್ಯೂ ಹೆಚ್ಚಾಗಿ ಕಂಡುಬರುವ ಪ್ರದೇಶಗಳಲ್ಲಿ ಕ್ಯೂಡೆಂಗಾ ಲಸಿಕೆಯ ಬಳಕೆಯನ್ನು ಶಿಫಾರಸು ಮಾಡಿದ್ದು, ಈ ಲಸಿಕೆಗೆ WHO ಪ್ರೀಕ್ವಾಲಿಫಿಕೇಶನ್ ಮಾನ್ಯತೆಯೂ ಲಭಿಸಿದೆ. ಇದರಿಂದ ಲಸಿಕೆಯ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವವು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದು ದೃಢಪಟ್ಟಿದೆ.

0 Comments