ಕಾಸರಗೋಡು : ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ ಆಟೋರಿಕ್ಷಾ ಪಲ್ಟಿಯಾಗಿ ಏಳು ವಿದ್ಯಾರ್ಥಿಗಳು ಹಾಗೂ ಚಾಲಕ ಗಾಯಗೊಂಡ ಘಟನೆ ಕಾಸರಗೋಡು ನಗರದ ಮಾರುಕಟ್ಟೆ ಸಮೀಪ ನಡೆದಿದೆ. ಅಪಘಾತ ಸಂಭವಿಸಿದ ಆಟೋರಿಕ್ಷಾದಲ್ಲಿ ಎರಡು ಶಾಲೆಗಳ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ಮಕ್ಕಳನ್ನು ಆಟೋದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಕೂರಿಸಿಕೊಂಡು ಹೋಗಿದ್ದು, ಅತಿವೇಗದಲ್ಲಿ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣ ಎನ್ನುವುದು ಸಿಸಿಟಿವಿ ದೃಶ್ಯಗಳಿಂದ ತಿಳಿದುಬಂದಿದೆ.
ಆಟೋರಿಕ್ಷಾದಲ್ಲಿ ಸಾಮಾನ್ಯ ಆಸನದ ಜೊತೆಗೆ ಹೆಚ್ಚುವರಿ ಮರದ ತಟ್ಟೆ ಅಳವಡಿಸಿ ಮಕ್ಕಳನ್ನು ಕರೆದೊಯ್ಯಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಗಾಯಗೊಂಡ ಮಕ್ಕಳ ಹೊರತಾಗಿ ಇನ್ನಷ್ಟು ಮಕ್ಕಳು ಆಟೋದಲ್ಲಿದ್ದರೇ ಎಂಬ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕಾಸರಗೋಡು ಸರ್ಕಾರಿ ಯುಪಿ ಶಾಲೆ ಹಾಗೂ ಮಡೋನಾ ಎಯುಪಿ ಶಾಲೆಯ ವಿದ್ಯಾರ್ಥಿಗಳು ಆಟೋರಿಕ್ಷಾದಲ್ಲಿದ್ದರು. ಗಾಯಾಳು ಮಕ್ಕಳನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಅತಿವೇಗದಿಂದ ನಿಯಂತ್ರಣ ಕಳೆದುಕೊಂಡ ಪರಿಣಾಮ ಆಟೋರಿಕ್ಷಾ ಪಲ್ಟಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿ ಮಕ್ಕಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

0 Comments