ಪಾಲಕ್ಕಾಡು : ಆಸ್ಪತ್ರೆಯ ತ್ಯಾಜ್ಯವನ್ನು ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಫೂಟ್ ಪಾತ್ ಮೇಲೆ ನಡೆಯುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹರಿದ ಪರಿಣಾಮ ಓರ್ವ ಮೃತಪಟ್ಟ ದಾರುಣ ಘಟನೆ ಪಾಲಕ್ಕಾಡು ಜಿಲ್ಲೆಯ ಮುಂಡೂರು ಒಂಬತ್ತನೇ ಮೈಲಿನಲ್ಲಿ ನಡೆದಿದೆ.
ಮೃತರನ್ನು ಮುಂಡೂರು ಯುವಕ್ಷೇತ್ರ ಕಾಲೇಜಿನ ದ್ವಿತೀಯ ವರ್ಷದ ಬಿಸಿಎ ವಿದ್ಯಾರ್ಥಿ, ಪಾಲಕ್ಕಾಡು ಪಾರಕ್ಕುಳಂ ನಿವಾಸಿ ಮೊಹಮ್ಮದ್ ಫರ್ಹಾನ್ ಎಂದು ಗುರುತಿಸಲಾಗಿದೆ. ಅಪಘಾತಕ್ಕೊಳಗಾದ ಇನ್ನೂ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗೆ ಪಾಲಕ್ಕಾಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂದು ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಗುಂಪಿನೊಳಗೆ ನಿಯಂತ್ರಣ ತಪ್ಪಿದ ಲಾರಿ ನುಗ್ಗಿಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಪಾಲಕ್ಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೊಹಮ್ಮದ್ ಫರ್ಹಾನ್ ಮೃತಪಟ್ಟರು ಎನ್ನಲಾಗಿದೆ.
ಲಾರಿ ಡಿಕ್ಕಿಯಿಂದ ಸ್ಥಳೀಯ ನಿವಾಸಿಯೊಬ್ಬರಿಗೂ ಗಾಯಗೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ಕುರಿತು ತನಿಖೆ ನಡೆಸುತ್ತಿದ್ದಾರೆ.

0 Comments