ಬದಿಯಡ್ಕ: ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ವಿವಿಧ ಕಲ್ಯಾಣ ಯೋಜನೆಗಳ ಸದುಪಯೋಗವನ್ನು ಪಡೆದು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಹೇಳಿದರು.
ಕೇರಳ ಸರ್ಕಾರದ ಪರಿಶಿಷ್ಟ ವರ್ಗ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ, ಕಾಸರಗೋಡು ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಕಚೇರಿ ಹಾಗೂ ಎಣ್ಮಕಜೆ ಪರಿಶಿಷ್ಟ ವರ್ಗ ವಿಸ್ತರಣಾ ಕಚೇರಿಯ ಸಹಯೋಗದಲ್ಲಿ 'ಅಡಿಯ ಪಣಿಯ' ಯೋಜನೆಯಡಿ ಬದಿಯಡ್ಕ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊರಗ ಸಮುದಾಯದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉಪಕರಣಗಳನ್ನು ವಿತರಿಸಿ ಅವರು ಮಾತನಾಡಿದರು.
ಸಮಾಜದ ಮುಖ್ಯವಾಹಿನಿಯಿಂದ ದೂರ ಉಳಿದಿರುವ ಜನರಿಗೆ ಅಭಿವೃದ್ಧಿಯ ದಾರಿ ತೋರಿಸುವುದೇ ಇಂತಹ ಯೋಜನೆಗಳ ಮುಖ್ಯ ಉದ್ದೇಶವಾಗಿದೆ. ಯೋಜನೆಗಳು ಕೇವಲ ಘೋಷಣೆಯಾಗದೆ ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮತ್ತು ಅವರು ಅದನ್ನು ಸಮರ್ಪಕವಾಗಿ ಬಳಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ. ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಪಡೆದು ಯಶಸ್ಸು ಸಾಧಿಸಿದವರು ತಮ್ಮ ಸಮುದಾಯದ ಇತರರಿಗೂ ಜಾಗೃತಿ ಮೂಡಿಸಿ ಪ್ರೇರಣೆ ನೀಡಬೇಕು. ಸರ್ಕಾರದ ನೆರವು ಪ್ರಗತಿಯ ಮೊದಲ ಹೆಜ್ಜೆಯಾಗಿದ್ದು, ಅದನ್ನು ಯಶಸ್ಸಿನ ಮೆಟ್ಟಿಲಾಗಿಸುವುದು ಪ್ರತಿಯೊಬ್ಬರ ಪರಿಶ್ರಮ ಮತ್ತು ಸಂಕಲ್ಪವನ್ನು ಅವಲಂಬಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‌ಟಿ ವರ್ಕಿಂಗ್ ಗ್ರೂಪ್ ಅಧ್ಯಕ್ಷ ಶ್ಯಾಮಪ್ರಸಾದ್ ಮಾನ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್, ಗಂಗಾಧರ ಗೋಳಿಯಡ್ಕ, ಶ್ಯಾಮಪ್ರಸಾದ್ ಸರಳಿ, ಲೀಲಾವತಿ, ಉಷಾ ಪಳ್ಳತ್ತಡ್ಕ, ಎಣ್ಮಕಜೆ ಪರಿಶಿಷ್ಟ ವರ್ಗ ವಿಸ್ತರಣಾಧಿಕಾರಿ ಶಮೀರ್ ಉಪಸ್ಥಿತರಿದ್ದು ಮಾತನಾಡಿದರು.
ಪ್ರೊಮೋಟರ್‌ಗಳಾದ ಧೀಕ್ಷಿತ್ ಸಿ.ಎಚ್., ಸುಮನ, ಪ್ರಣವ್ ಗಣೇಶ್ ಹಾಗೂ ರೀನಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.

0 Comments