ಮುಂಬೈ : ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಒಟ್ಟು ಆರು ಮಂದಿ ಸಜೀವ ದಹನಗೊಂಡಿದ್ದಾರೆ.
ಇಂದು ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎಥೆನಾಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಮೊದಲು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಇಂಧನ ಸೋರಿಕೆಯಾಗಿತ್ತು. ಇದರ ಪರಿಣಾಮ ವಾಹನಗಳ ಸಂಚಾರವನ್ನು ಮತ್ತೊಂದು ಮಾರ್ಗಕ್ಕೆ ತಿರುಗಿಸಲಾಗಿತ್ತು.
ಈ ವೇಳೆ ಪುಣೆಯಿಂದ ವಾರ್ಧಾಕ್ಕೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ವೇಗವಾಗಿ ಬಂದ ಮೆಣಸಿನಕಾಯಿ ತುಂಬಿದ್ದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ವೇಗವಾಗಿ ವ್ಯಾಪಿಸಿದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಹಾಗೂ ಲಾರಿಯ ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ತೀವ್ರ ಬೆಂಕಿಯಿಂದ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಮೃತರನ್ನು ವಾರ್ಧಾದ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಪುತ್ರಿ ಜಾಹ್ನವಿ ಟಿಪ್ಲೆ, ಕಾರು ಚಾಲಕ ಅಂಕುಶ್ ರಾವತ್, ಲಾರಿ ಚಾಲಕ ಸಂಜಯ್ ಕುಮಾರ್ ಹಾಗೂ ಕ್ಲೀನರ್ ಸಮರ್ಜಿತ್ ಪಾಲ್ ಎಂದು ಗುರುತಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಹೆದ್ದಾರಿ ಸುರಕ್ಷತಾ ಪಡೆ, ವಾರ್ಧಾ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿ, ವಾಹನಗಳನ್ನು ತೆರವುಗೊಳಿಸಿದರು.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

0 Comments