ತಿರುವನಂತಪುರ : ಕೇರಳ ಸಾರ್ವಜನಿಕ ಸೇವಾ ಆಯೋಗ (PSC) ಪರೀಕ್ಷಾ ಅಕ್ರಮ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ಮತ್ತಷ್ಟು ಚುರುಕುಗೊಳಿಸಿದೆ. ಐಜಿಪಿ ಅಜಿತಾ ಬೇಗಂ ನೇತೃತ್ವದ ಎಸ್‌ಐಟಿ ತಂಡ ಇಂದು ಪಿಎಸ್‌ಸಿ ಪ್ರಧಾನ ಕಚೇರಿಯಲ್ಲಿ ಸಮಗ್ರ ಪರಿಶೀಲನೆ ನಡೆಸಿತು.
ಪರೀಕ್ಷೆಗೆ ಸಂಬಂಧಿಸಿದ ಕಂಪ್ಯೂಟರ್‌ಗಳು ಹಾಗೂ ಸಾಫ್ಟ್‌ವೇರ್‌ಗಳ ಪರಿಶೀಲನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಎಸ್‌ಐಟಿ ತಂಡಕ್ಕೆ ಐಟಿ ತಜ್ಞರೂ ಸಹಕಾರ ನೀಡುತ್ತಿದ್ದಾರೆ. ಇದೇ ನಾಲ್ಕನೇ ಬಾರಿ ಎಸ್‌ಐಟಿ ತಂಡ ಪಿಎಸ್‌ಸಿ ಕಚೇರಿಗೆ ಭೇಟಿ ನೀಡಿದ್ದು, ಜುಲೈ 25ರೊಳಗೆ ಪ್ರಾಥಮಿಕ ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಸಲ್ಲಿಸುವ ಗುರಿ ಹೊಂದಿದೆ.
ಈ ತಿಂಗಳ 16ರಂದು ಎಸ್‌ಐಟಿ ತಂಡ ಪಿಎಸ್‌ಸಿ ಕಚೇರಿಯಲ್ಲಿ ಪರಿಶೀಲನೆ ನಡೆಸಿ, ಪರೀಕ್ಷಾ ನಿಯಂತ್ರಕರ ಕಚೇರಿಯ ದಾಖಲೆಗಳನ್ನು ಪರಿಶೀಲಿಸಿತ್ತು. ಅಭ್ಯರ್ಥಿಗಳ ಹೇಳಿಕೆಗಳನ್ನು ದಾಖಲಿಸಿದ ಬಳಿಕವೇ ತನಿಖೆಯನ್ನು ಮತ್ತಷ್ಟು ವಿಸ್ತರಿಸಲಾಗಿದೆ. ಇದೇ ವೇಳೆ, ಯೋಜನಾ ಮಂಡಳಿ ಮುಖ್ಯಸ್ಥರ ಪರೀಕ್ಷೆಯಲ್ಲಿನ ಅಕ್ರಮ ಆರೋಪ ಕುರಿತು ತನಿಖೆ ನಡೆಸಿದ ಆಂತರಿಕ ವಿಜಿಲೆನ್ಸ್ ತಂಡವು ತನ್ನ ಪ್ರಾಥಮಿಕ ವರದಿಯನ್ನು ಇಂದು ಗೃಹ ಇಲಾಖೆಗೆ ಸಲ್ಲಿಸುವ ಸಾಧ್ಯತೆ ಇದೆ.
ಯೋಜನಾ ಮಂಡಳಿ ಮುಖ್ಯಸ್ಥರ ಪರೀಕ್ಷೆ ಹಾಗೂ ಕೇರಳ ಆಡಳಿತ ಸೇವೆ (KAS) ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರೈಂ ಬ್ರಾಂಚ್ ತನಿಖೆಗೆ ಆದೇಶಿಸಿತ್ತು. ಮುಖ್ಯಮಂತ್ರಿ ವಿ.ಡಿ. ಸತೀಶನ್ ತನಿಖೆ ಘೋಷಣೆ ಮಾಡಿದ್ದು, ಐಜಿಪಿ ಅಜಿತಾ ಬೇಗಂ ನೇತೃತ್ವದ ತಂಡದಲ್ಲಿ ಎಸ್‌ಪಿ ಜಕಾರಿಯಾ ಮ್ಯಾಥ್ಯೂ ಹಾಗೂ ಡಿವೈಎಸ್‌ಪಿ ಜಿ. ಅಜಯ್ ನಾಖ್ ಸೇರಿದಂತೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

0 Comments