ಪ್ರತಿ ವರ್ಷ ಜುಲೈ 26ರಂದು ಭಾರತದಲ್ಲಿ ಕಾರ್ಗಿಲ್ ವಿಜಯ ದಿನವನ್ನು ಆಚರಿಸಲಾಗುತ್ತದೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆ ಸಾಧಿಸಿದ ಐತಿಹಾಸಿಕ ವಿಜಯವನ್ನು ಸ್ಮರಿಸುವ ದಿನ ಇದಾಗಿದೆ. ದೇಶದ ಗಡಿಯನ್ನು ಕಾಪಾಡಲು ತಮ್ಮ ಪ್ರಾಣವನ್ನೇ ಅರ್ಪಿಸಿದ ವೀರ ಯೋಧರಿಗೆ ಗೌರವ ಸಲ್ಲಿಸುವ ಈ ದಿನವು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಕ್ಷಣವಾಗಿದೆ.
1999ರ ಮೇ ತಿಂಗಳಲ್ಲಿ ಪಾಕಿಸ್ತಾನದ ಬೆಂಬಲಿತ ನುಸುಳುಕೋರರು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಪ್ರದೇಶದ ಹಲವು ಎತ್ತರದ ಪರ್ವತ ಶಿಖರಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದರು. ಈ ಸವಾಲನ್ನು ಎದುರಿಸಲು ಭಾರತೀಯ ಸೇನೆ 'ಆಪರೇಷನ್ ವಿಜಯ' ಎಂಬ ಕಾರ್ಯಾಚರಣೆಯನ್ನು ಆರಂಭಿಸಿತು.
ಕಠಿಣ ಹವಾಮಾನ, ಕಡಿದಾದ ಪರ್ವತಗಳು ಮತ್ತು ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತೀಯ ಯೋಧರು ಅಸಾಧಾರಣ ಶೌರ್ಯ ಮತ್ತು ಧೈರ್ಯ ಪ್ರದರ್ಶಿಸಿ ಶತ್ರುಗಳನ್ನು ಹಿಮ್ಮೆಟ್ಟಿಸಿದರು. ಅಂತಿಮವಾಗಿ ಜುಲೈ 26, 1999 ರಂದು ಭಾರತೀಯ ಸೇನೆಯು ಶತ್ರುಗಳನ್ನು ಸಂಪೂರ್ಣವಾಗಿ ಹೊಡೆದೋಡಿಸಿ, ಹುತಾತ್ಮರ ರಕ್ತದಿಂದ ನೆನೆದ ಆ ಮಣ್ಣಿನಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿತು. ಅಂದಿನಿಂದ ಈ ದಿನವನ್ನು 'ಕಾರ್ಗಿಲ್ ವಿಜಯ ದಿನ' ಎಂದು ಘೋಷಿಸಲಾಯಿತು.
ಕಾರ್ಗಿಲ್ ಯುದ್ಧವು ಭಾರತೀಯ ಸೇನೆ ಎದುರಿಸಿದ ಅತ್ಯಂತ ಕಠಿಣ ಯುದ್ಧಗಳಲ್ಲಿ ಒಂದಾಗಿದೆ. ಶತ್ರುಗಳು ಸಾವಿರಾರು ಅಡಿ ಎತ್ತರದ ಪರ್ವತಗಳ ಮೇಲಿದ್ದುಕೊಂಡು ಗುಂಡಿನ ದಾಳಿ ನಡೆಸುತ್ತಿದ್ದರು. ನಮ್ಮ ಯೋಧರು ಕೆಳಗಿನಿಂದ ಮೇಲಕ್ಕೆ ಏರಿ ಹೋಗಿ ಹೋರಾಡಬೇಕಾದ ಅತಿ ದುರ್ಗಮ ಪರಿಸ್ಥಿತಿ ಇತ್ತು. ಮೈನಸ್ ಡಿಗ್ರಿ ತಾಪಮಾನ, ಭೀಕರ ಹಿಮಪಾತ ಮತ್ತು ಕಿರಿದಾದ ದಾರಿಗಳು ಸೈನಿಕರಿಗೆ ದೈಹಿಕವಾಗಿ ದೊಡ್ಡ ಸವಾಲನ್ನು ಒಡ್ಡಿದ್ದವು. ಆದರೆ, ಈ ಎಲ್ಲಾ ಅಡೆತಡೆಗಳನ್ನು ಮೀರಿ ನಮ್ಮ ಸೈನಿಕರು ತೋರಿದ ಸಾಹಸ ವಿಶ್ವದಲ್ಲೇ ಅಪ್ರತಿಮವಾದದ್ದು.
ಸುಮಾರು 60 ದಿನಗಳ ಕಾಲ ನಡೆದ ಈ ಭೀಕರ ಹೋರಾಟದಲ್ಲಿ ಭಾರತೀಯ ಸೇನೆ ಅಸಾಮಾನ್ಯ ಸಾಹಸವನ್ನು ಮೆರೆಯಿತು. ಮೇಜರ್ ಪದ್ಮಪಾಣಿ ಆಚಾರ್ಯ, ಕ್ಯಾಪ್ಟನ್ ವಿಕ್ರಮ್ ಬಾತ್ರಾ, ರೈಫಲ್ ಮನ್ ಸಂಜಯ್ ಕುಮಾರ್, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಯೋಗೇಂದ್ರ ಸಿಂಗ್ ಯಾದವ್ ಮುಂತಾದ ಅದೆಷ್ಟೋ ವೀರ ಯೋಧರು ತಮ್ಮ ಪ್ರಾಣದ ಹಂಗನ್ನು ತೊರೆದು ಹೋರಾಡಿದರು. ನೂರಾರು ಭಾರತೀಯ ವೀರ ಯೋಧರು ದೇಶಕ್ಕಾಗಿ ತಮ್ಮ ಜೀವವನ್ನೇ ಅರ್ಪಿಸಿದರು. ಅವರ ತ್ಯಾಗ, ದೇಶಪ್ರೇಮ ಮತ್ತು ಕರ್ತವ್ಯನಿಷ್ಠೆ ಇಂದಿಗೂ ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿಯಾಗಿದೆ. ಯುವ ಪೀಳಿಗೆಯು ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ದೇಶದ ಅಭಿವೃದ್ಧಿ ಹಾಗೂ ಭದ್ರತೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕು.
ಕಾರ್ಗಿಲ್ ವಿಜಯ ದಿನದಂದು ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಹುತಾತ್ಮ ಯೋಧರಿಗೆ ಪುಷ್ಪನಮನ ಸಲ್ಲಿಸಲಾಗುತ್ತದೆ, ಶಾಲಾ-ಕಾಲೇಜುಗಳಲ್ಲಿ ಭಾಷಣ, ಪ್ರಬಂಧ ಮತ್ತು ದೇಶಭಕ್ತಿ ಗೀತೆಗಳ ಕಾರ್ಯಕ್ರಮಗಳು ನಡೆಯುತ್ತವೆ. ಈ ದಿನವು ದೇಶದ ಏಕತೆ, ಅಖಂಡತೆ ಮತ್ತು ರಾಷ್ಟ್ರೀಯ ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತದೆ.
ಈ ದಿನಾಚರಣೆ ಕೇವಲ ಒಂದು ವಿಜಯೋತ್ಸವವಲ್ಲ; ಅದು ನಮ್ಮ ಸೈನಿಕರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಅಮರ ನೆನಪು. ಅವರ ಬಲಿದಾನದಿಂದಲೇ ಇಂದು ನಾವು ಶಾಂತಿ ಮತ್ತು ಸ್ವಾತಂತ್ರ್ಯದ ಜೀವನವನ್ನು ನಡೆಸುತ್ತಿದ್ದೇವೆ. ನಮ್ಮ ದೇಶದ ಸ್ವಾತಂತ್ರ್ಯ ಮತ್ತು ಭದ್ರತೆಗಾಗಿ ತಮ್ಮ ಸರ್ವಸ್ವವನ್ನು ಸಮರ್ಪಿಸಿದ ವೀರ ಯೋಧರನ್ನು ಸದಾ ಗೌರವದಿಂದ ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ.
ಸಂಗ್ರಹ ಲೇಖನ : ವನಜಾಕ್ಷಿ ಪಿ. ಚೆಂಬ್ರಕಾನ

0 Comments