ನವದೆಹಲಿ : ದೇಶದ ಮೊದಲ ಹೈಡ್ರೋಜನ್ ಇಂಧನ ಚಾಲಿತ ಪ್ರಯಾಣಿಕರ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು. ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಆರಂಭವಾಗಿರುವ ಈ ರೈಲು ಸೋನಿಪತ್‌ವರೆಗೆ 89 ಕಿ.ಮೀ.ದೂರ ಸಂಚರಿಸಲಿದೆ.
ನಮೋ ಗ್ರೀನ್ ರೈಲ್ ಎಂದು ಹೆಸರಿಸಲಾದ ಈ ರೈಲು ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿದ್ದು, ಸೇವೆ ಆರಂಭಿಸುವ ಮೂಲಕ ವಿಶ್ವದ ಅತಿ ಉದ್ದದ ಬ್ರಾಡ್‌ಗೇಜ್ ಹೈಡ್ರೋಜನ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಭಾರತೀಯ ರೈಲ್ವೆಯನ್ನು ಸಂಪೂರ್ಣ ಇಂಗಾಲ ಮುಕ್ತ ಮಾಡುವ ನಿಟ್ಟಿನಲ್ಲಿ ಈ ಪೈಲಟ್ ಯೋಜನೆ ಅತ್ಯಂತ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ. ಸಾಂಪ್ರದಾಯಿಕ ಡೀಸೆಲ್ ಅಥವಾ ಎಲೆಕ್ಟ್ರಿಕ್ ರೈಲುಗಳಿಗಿಂತ ಹೈಡ್ರೋಜನ್ ರೈಲುಗಳು ಸಂಪೂರ್ಣ ವಿಭಿನ್ನವಾಗಿವೆ. ಸಾಮಾನ್ಯ ಎಲೆಕ್ಟ್ರಿಕ್ ರೈಲುಗಳು ಚಲಿಸಲು ಹಳಿಗಳ ಮೇಲೆ ವಿದ್ಯುತ್ ತಂತಿಗಳ ಅಗತ್ಯವಿರುತ್ತದೆ. ಆದರೆ, ಈ ಹೈಡ್ರೋಜನ್ ಫ್ಯುಯೆಲ್ ಸೆಲ್ ರೈಲು ತನ್ನೊಳಗೆ ಸ್ವತಃ ವಿದ್ಯುತ್ ಉತ್ಪಾದಿಸಿಕೊಳ್ಳುತ್ತದೆ.
ಕಾರ್ಯವಿಧಾನ: ರೈಲಿನಲ್ಲಿ ಅಳವಡಿಸಲಾಗಿರುವ ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ ಫ್ಯುಯೆಲ್ ಸೆಲ್ ವಾಹನದಲ್ಲಿ ಸಂಗ್ರಹಿಸಿರುವ ಹೈಡ್ರೋಜನ್ ಮತ್ತು ವಾತಾವರಣದಲ್ಲಿನ ಆಮ್ಲಜನಕದ ನಡುವೆ ರಾಸಾಯನಿಕ ಪ್ರಕ್ರಿಯೆ ನಡೆಸಿ ವಿದ್ಯುತ್ ಉತ್ಪಾದಿಸುತ್ತದೆ.
ಶೂನ್ಯ ಮಾಲಿನ್ಯ ಈ ಪ್ರಕ್ರಿಯೆಯ ನಂತರ ಕೇವಲ ನೀರಿನ ಆವಿ ಮತ್ತು ಶಾಖ ಮಾತ್ರ ಉಪ-ಉತ್ಪನ್ನಗಳಾಗಿ ಹೊರಬರುತ್ತವೆ. ಅಂದರೆ, ಈ ರೈಲಿನಿಂದ ಯಾವುದೇ ಹಾನಿಕಾರಕ ಹೊಗೆ ಹೊರಸೂಸುವುದಿಲ್ಲ.
ಹೆಚ್ಚಿನ ಶಕ್ತಿ: ಒಂದು ಕೆಜಿ ಡೀಸೆಲ್ ಸುಮಾರು 43 ಮೆಗಾಜೌಲ್ (MJ) ಶಕ್ತಿ ನೀಡಿದರೆ, ಒಂದು ಕೆಜಿ ಹೈಡ್ರೋಜನ್ ಬರೋಬ್ಬರಿ 120 ಮೆಗಾಜೌಲ್ ಶಕ್ತಿ ಉತ್ಪಾದಿಸುತ್ತದೆ.
ಮುಂದಿನ ದಿನಗಳಲ್ಲಿ ಕಲ್ಕಾ-ಶಿಮ್ಲಾ ಸೇರಿದಂತೆ ದೇಶದ ಹೆರಿಟೇಜ್ ರೈಲ್ವೆ ಮಾರ್ಗಗಳಲ್ಲೂ ಹೈಡ್ರೋಜನ್ ತಂತ್ರಜ್ಞಾನ ವಿಸ್ತರಿಸಲು ರೈಲ್ವೆ ಯೋಜನೆ ರೂಪಿಸಿದೆ.

0 Comments