ಕುಂಜತ್ತೂರು : ಮಂಜೇಶ್ವರ ಪಂಚಾಯತ್‌ನ ಕುಂಜತ್ತೂರು ಮಾಡದಲ್ಲಿರುವ ಹಿಂದೂ ಸಮುದಾಯದ ಸ್ಮಶಾನ ಭೂಮಿಯನ್ನು ಒತ್ತುವರಿಯಿಂದ ಸಂರಕ್ಷಿಸಿ, ಪುನರ್‌ನಿರ್ಮಾಣ ಕಾಮಗಾರಿಗಳನ್ನು ಕೈಗೊಳ್ಳಲು ಪಂಚಾಯತ್ ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿ ಹಿಂದೂ ಮುಂದಾಳುಗಳು ಇಂದು ಪೂರ್ವಾಹ್ನ ಸ್ಥಳಕ್ಕೆ ಭೇಟಿಯಿತ್ತು ಆಗ್ರಹಿಸಿದರು.
ಸ್ಮಶಾನ ಭೂಮಿಯಲ್ಲಿ ಪೂರ್ವಜರ ಅಂತ್ಯಸಂಸ್ಕಾರ ನಡೆಸಿದ ಸ್ಥಳಗಳಲ್ಲಿ ವಿವರಗಳನ್ನು ದಾಖಲಿಸಲಾಗಿದ್ದ ಶಿಲಾಫಲಕಗಳು ಸೇರಿದಂತೆ ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿತ್ತು. ಈ ಬಗ್ಗೆ ಕಾರ್ಯಕರ್ತರ ಜತೆ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸ್ಥಳಕ್ಕೆ ತೆರಳಿ ಪಂಚಾಯತ್ ಒಡೆತನದಲ್ಲಿರುವ 2.70 ಎಕರೆ ವಿಸ್ತೀರ್ಣದ ಸ್ಮಶಾನ ಭೂಮಿಯಲ್ಲಿ ವಿದ್ಯುತ್ ಅಥವಾ ನೀರಿನ ಸೌಲಭ್ಯವಿಲ್ಲದಿರುವುದು ಅಧಿಕಾರಿಗಳ ತೀವ್ರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ ಎಂದರು.
ಸುತ್ತುಗೋಡೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸ್ಮಶಾನ ಭೂಮಿಯನ್ನು ಸಂರಕ್ಷಿಸಬೇಕೆಂಬ ಹೈಕೋರ್ಟ್ ಆದೇಶವನ್ನು ಜಾರಿಗೊಳಿಸಲು ಪಂಚಾಯತ್ ಅಧಿಕಾರಿಗಳು ಮುಂದಾಗಬೇಕು. ಆದೇಶ ಜಾರಿಗೊಳಿಸುವಲ್ಲಿ ವಿಫಲವಾದರೆ ಸಾರ್ವಜನಿಕರನ್ನು ಸಂಘಟಿಸಿ ಪ್ರಬಲ ಹೋರಾಟ ಆರಂಭಿಸಲಾಗುವುದು ಎಂದು ಎಂ.ಎಲ್. ಅಶ್ವಿನಿ ಎಚ್ಚರಿಸಿದ್ದಾರೆ.
ಸಾರ್ವಜನಿಕ ರುದ್ರಭೂಮಿ ಸಮಿತಿ ಅಧ್ಯಕ್ಷ ಉಮೇಶ್ ಪೂಮಣ್ಣ, ರಾಜ ಬೆಳ್ಚಪ್ಪಾಡ, ಸಂಜೀವ ಶೆಟ್ಟಿ, ದಯಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ರಾಜೇಶ್ ತೂಮಿನಾಡು, ಮಾಜಿ ಪಂಚಾಯತ್ ಜನಪ್ರತಿನಿಧಿ ಶಶಿಕಲಾ, ಹೃತ್ವಿಕ್ ಮೊದಲಾದವರು ಉಪಸ್ಥಿತರಿದ್ದರು.

0 Comments