ದುಬೈ : 'ರಕ್ತದಾನ ಮಾಡಿ ಜೀವ ಉಳಿಸಿ' ಎಂಬ ಧ್ಯೇಯ ವಾಕ್ಯದಂತೆ ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಆಯೋಜಿಸಲಾದ 'ಯುಎಇ ಯ ರಕ್ತದಾನ ಶಿಬಿರ' ಆಯೋಜಕರಾದ ಬಾಲಕೃಷ್ಣ ಸಾಲಿಯಾನ್ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಯಿತು.
ಕುಲಾಲ ಸಮಾಜ ಯುಎಇ ತಂಡದ ಸಹಕಾರದೊಂದಿಗೆ ಆಯೋಜಿಸಿದ್ದ ಶಿಬಿರದಲ್ಲಿ ಸುಮಾರು 50 ಮಂದಿ ಸ್ವಯಂಪ್ರೇರಿತ ರಕ್ತದಾನಿಗಳು ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಗೆ ಕೈಜೋಡಿಸಿದರು. ಸಮಾಜಮುಖಿ ಕಾರ್ಯಕ್ರಮಕ್ಕೆ ಸದಸ್ಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶಿಬಿರದ ಯಶಸ್ವಿ ಆಯೋಜನೆಗೆ ಶ್ರಮಿಸಿದ ಯುಎಇ ರಕ್ತದಾನಿಗಳ ಸಂಘಟಕರಾದ ಬಾಲಕೃಷ್ಣ ಸಾಲಿಯಾನ್ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸಂತೋಷ್ ಶೆಟ್ಟಿ ಪೊಳಲಿ ಅವರನ್ನು ಕುಲಾಲ ಫ್ಯಾಮಿಲಿ ಯುಎಇ ವತಿಯಿಂದ ಶಾಲು ಹೊದಿಸಿ, ಫಲ-ಪುಷ್ಪ ನೀಡಿ ಸನ್ಮಾನಿಸಲಾಯಿತು.
ಕುಲಾಲ ಫ್ಯಾಮಿಲಿ ಯುಎಇ ಪರವಾಗಿ ವಿಟ್ಟಲ್ ಮೂಲ್ಯ ಹಾಗೂ ನಿಶ್ ಸುನಿಲ್ ಕುಲಾಲ್ ಅವರು ಗೌರವ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಕುಲಾಲ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದು, ರಕ್ತದಾನದ ಮಹತ್ವವನ್ನು ಪ್ರತಿಪಾದಿಸಿ, ಇಂತಹ ಸಮಾಜಮುಖಿ ಸೇವಾ ಕಾರ್ಯಕ್ರಮಗಳು ಮುಂದೆಯೂ ನಿರಂತರವಾಗಿ ನಡೆಯುವಂತೆ ಆಶಯ ವ್ಯಕ್ತಪಡಿಸಿದರು. ಅಕ್ಷಯ್ ಕುಲಾಲ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು, ಮುಖೇಶ್ ಕುಲಾಲ್ ಸಹಕರಿಸಿದರು.

0 Comments