ವಿಟ್ಲ : ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಪರಿಣಾಮ ಅದರೊಳಗೆ ಸಿಲುಕಿದ್ದ ಮಗು, ಮಹಿಳೆ ಹಾಗೂ ಚಾಲಕನನ್ನು ವಿಟ್ಲ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತು ಸಿಬ್ಬಂದಿ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಬಂಟ್ವಾಳ ತಾಲೂಕಿನ ಸೂರಿಕುಮೇರ್ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ.
ಇನ್ನೊಂದು ಪ್ರಕರಣದ ಸಂಬಂಧ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್‌ಐ ರಾಮಕೃಷ್ಣ ಹಾಗೂ ಪೊಲೀಸ್ ಸಿಬ್ಬಂದಿ ಕರುಣಾಕರ ಅವರಿಗೆ ಅಪಘಾತದ ಶಬ್ದ ಕೇಳಿಬಂದ ತಕ್ಷಣ ಸ್ಥಳಕ್ಕೆ ಧಾವಿಸಿದರು. ಚರಂಡಿಗೆ ಉರುಳಿದ್ದ ಕಾರಿನೊಳಗೆ ಸಿಲುಕಿದ್ದ ಮೂವರನ್ನೂ ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಿದರು.
ಅಪಘಾತದ ಆಘಾತದಿಂದ ಭಯಗೊಂಡು ಅಳುತ್ತಿದ್ದ ಪುಟ್ಟ ಮಗುವನ್ನು ಎಸ್‌ಐ ರಾಮಕೃಷ್ಣ ತಮ್ಮ ತೋಳಿನಲ್ಲಿ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಈ ಮಾನವೀಯ ಕ್ಷಣ ಅಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಅಪಘಾತದಲ್ಲಿ ಮಗು, ಮಹಿಳೆ ಹಾಗೂ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಿಸಿಟಿವಿ ದೃಶ್ಯಗಳು ವೈರಲ್ ಆದ ಬಳಿಕ, "ಇಂತಹ ಅಧಿಕಾರಿಗಳೇ ಪೊಲೀಸ್ ಇಲಾಖೆಯ ಹೆಮ್ಮೆ", "ಕರ್ತವ್ಯಕ್ಕಿಂತ ಮಾನವೀಯತೆಗೆ ಆದ್ಯತೆ ನೀಡಿದ ನಿಜವಾದ ಹೀರೋ" ಎಂದು ಸಾರ್ವಜನಿಕರು ಹಾಗೂ ನೆಟ್ಟಿಗರು ಎಸ್‌ಐ ರಾಮಕೃಷ್ಣ ಮತ್ತು ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
.jpeg)
0 Comments