ಮಂಗಳೂರು : ಸಮುದ್ರದ ಪ್ರಬಲ ಅಲೆಗಳ ಹೊಡೆತಕ್ಕೆ ಮೀನುಗಾರಿಕಾ ದೋಣಿಯೊಂದು ಪಲ್ಟಿಯಾಗಿ, ಅದರಲ್ಲಿದ್ದ ಆರು ಮಂದಿ ಮೀನುಗಾರರು ಸಮುದ್ರಕ್ಕೆ ಬಿದ್ದ ಘಟನೆ ಮಂಗಳೂರು ಹೊರವಲಯದ ಸುರತ್ಕಲ್ ಸಮೀಪ ನಡೆದಿದೆ. ಸ್ಥಳೀಯ ಮೀನುಗಾರರ ಸಮಯೋಚಿತ ಕಾರ್ಯಾಚರಣೆಯಿಂದ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ದೋಣಿಯಲ್ಲಿ ಆಂಧ್ರಪ್ರದೇಶ ಮೂಲದ ಆರು ಮಂದಿ ಮೀನುಗಾರರು ಇದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಏಕಾಏಕಿ ಎದ್ದ ಪ್ರಬಲ ಅಲೆಗಳ ಹೊಡೆತಕ್ಕೆ ದೋಣಿ ನಿಯಂತ್ರಣ ತಪ್ಪಿ ಪಲ್ಟಿಯಾಯಿತು.
ದೋಣಿ ಮಗುಚಿಬಿದ್ದ ತಕ್ಷಣ ಮೀನುಗಾರರು ಸಮುದ್ರಕ್ಕೆ ಬಿದ್ದಿದ್ದು, ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಎಲ್ಲ ಆರು ಮಂದಿಯನ್ನು ಸುರಕ್ಷಿತವಾಗಿ ತೀರಕ್ಕೆ ಕರೆತಂದರು.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ, ದೋಣಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

0 Comments